ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುವ ಸರಕಾರ ಚುನಾವಣೆ ಪ್ರಚಾರಕ್ಕೆ ಯಾಕೆ ಕಡಿವಾಣ ಹಾಕುತ್ತಿಲ್ಲ: ಡಾ .ಎಂ.ಮೋಹನ್ ಆಳ್ವ ಪ್ರಶ್ನೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುವ ಸರಕಾರ ಚುನಾವಣೆ ಪ್ರಚಾರಕ್ಕೆ ಯಾಕೆ ಕಡಿವಾಣ ಹಾಕುತ್ತಿಲ್ಲ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಶ್ನಿಸಿದ್ದಾರೆ.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಉತ್ಸವ’ದಲ್ಲಿ ಮಾತನಾಡಿದ ಅವರು, ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಯನ್ನು ಬಂದ್ ಮಾಡುವ ಸರಕಾರ, ರೋಗ ನಿರೋಧಕ ಶಕ್ತಿಯೇ ಇಲ್ಲದವರು ಬಳಸುವ ಮದ್ಯದಂಗಡಿ, ಬೀಚ್‍ಗಳಲ್ಲಿನ ಮೋಜು, ಸಭೆ ಸಮಾರಂಭಗಳಲ್ಲಿ ಜನಸ್ತೋಮ, ರಾಜಕಾರಣಿಗಳ ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ಯಾವುದೇ ಕಡಿವಾಣ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸರಕಾರದ ಕ್ರಮದಿಂದ ಎಲ್ಲ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಅನುಭವಿಸುತ್ತಿದೆ. ಇದರಿಂದ ರಾಜ್ಯದಲ್ಲಿರುವ ಒಂದು ಕೋಟಿ ವಿದ್ಯಾರ್ಥಿಗಳು ಸರಿಯಾದ ಶಿಕ್ಷಣ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾಭ್ಯಾಸ ಸರಿಯಾಗಿ ಸಿಗದಿದ್ದರೆ ಮಕ್ಕಳ ಮುಂದಿನ ಭವಿಷ್ಯವೇ ತೊಂದರೆ ಸಿಲುಕಲಿದೆ ಎಂದ ಅವರು, ಸೋಂಕು ಪೀಡಿತರು ಗುಣಮುಖರಾಗುತ್ತಿದ್ದಾರೆ. ಇದಕ್ಕೆ ವೈದ್ಯ ಲೋಕ ಮಾನವೀಯತೆಯ ನೆಲೆಯಲ್ಲಿ ಚಿಕಿತ್ಸೆ ನೀಡಬೇಕು. ಕೊರೋನ ಚಿಕಿತ್ಸೆ, ಮೃತ ದೇಹ ಅಂತ್ಯಕ್ರಿಯೆಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇಂತಹ ಸಂದರ್ಭದಲ್ಲಿ ವಿದ್ಯಾ ಕ್ಷೇತ್ರವನ್ನು ಬಂದ್ ಮಾಡುವುದನ್ನು ನಾವು ಒಪ್ಪುವುದಿಲ್ಲ. ಅತೀಹೆಚ್ಚು ರೋಗ ನಿರೋಧಕ ಶಕ್ತಿ ಇರುವವರು ವಿದ್ಯಾರ್ಥಿಗಳು ಕೊರೋನ ಸೋಂಕು ಎದುರಿಸಿ ಗುಣಪಡಿಸುವಂತೆ ಮಾಡಬೇಕು ಎಂದರು.
ಕೇಂದ್ರ, ರಾಜ್ಯ ಸರಕಾರಗಳು ಹಾಗೂ ರಾಜ ಕಾರಣಿಗಳು ಇಂದು ಮನಸ್ಸು ಗಳನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ. ಅವರಿಗೆ ಓಟು ಮುಖ್ಯವೇ ಹೊರತು ಜನರಲ್ಲ. ಆದುದರಿಂದ ಖಾಸಗಿ ಚಿಂತನೆಯ ಮೂಲಕ ನಾವೇ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ಖಾಸಗಿ ಚಿಂತನೆ ಎಂಬುದು ಜನರ ರಕ್ತ ಹೀರುವ ತಿಗಣೆ ಯಾಗಿರದೆ ಸಮಾಜದ ಜೊತೆ ಇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದರೊಂದಿಗೆ ನಾವು ವಿದ್ಯಾವಂತರು, ಐಶ್ವರ್ಯವಂತರಾದರೂ ಇಂದಿಗೂ ಧರ್ಮ, ಮತ, ಜಾತಿಗಳ ನಡುವಿನ ವ್ಯಾತ್ಯಾಸವನ್ನು ಅರಿತಿಲ್ಲ. ಅದರ ಮಧ್ಯೆ ಕಂದಕಗಳೇ ಸೃಷ್ಠಿ ಯಾಗುತ್ತಿದೆ. ಈ ಜಗತ್ತಿನಲ್ಲಿ ಇರುವುದು ಒಂದೇ ಧರ್ಮ. ಅದರ ತಿರುಳು ಗಳನ್ನು ಬೇರೆ ಬೇರೆ ಪ್ರತಿಪಾದಕರು ಪ್ರಚಾರ ಮಾಡಿ ಮತಗಳಾಗಿವೆ. ಎಲ್ಲ ಜಾತಿಗಳು ಸೇರಿ ಸಮಾಜ ಆಗುವಂತೆ, ಎಲ್ಲ ಮತಗಳು ಸೇರಿ ಧರ್ಮ ಆಗು ತ್ತದೆ. ಇಂದು ಸಮಾಜದಲ್ಲಿ ಜಾತಿಗಳನ್ನು ವೈಭವೀಕರಿಸಲಾಗುತ್ತಿದೆ. ಕಲೆ ಮತ್ತು ಕ್ರೀಡೆಯನ್ನು ಕೂಡ ಜಾತಿಗೆ ಸೀಮಿತ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರಿಗೆ ವಿಶ್ವಪ್ರಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ನಂತರ ಶಿವಮೊಗ್ಗ ರಂಗಾಯಣದಿಂದ ‘ಹಕ್ಕಿ ಕಥೆ’ ಮಕ್ಕಳ ಪಪ್ಪೆಟ್ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ವಹಿಸಿದ್ದರು. ಈ ಸಂದರ್ಭ ತುಳುಕೂಟ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಶಿವಮೊಗ್ಗ ರಂಗಾ ಯಣ ನಿರ್ದೇಶಕ ಸಂದೇಶ್ ಜವಳಿ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಪ್ರಭಾವತಿ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ವಿಶ್ವಪ್ರಭ ಪುರಸ್ಕಾರ ಸಮಿತಿ ಸಂಚಾಲಕ ನಾಗರಾಜ್ ಹೆಬ್ಬಾರ್, ಶಿಲ್ಪಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!