ರಾಹುಲ್ ವಿರುದ್ಧ ದೂರು ನೀಡಿದ ಬೆನ್ನಲ್ಲೇ ‘ಫ್ಲೈಯಿಂಗ್ ಕಿಸ್’ ನೀಡುವುದು ನೋಡಿಲ್ಲ ಎಂದ ಬಿಜೆಪಿ ಸಂಸದೆ ಹೇಮಾ ಮಾಲಿನಿ
ಹೊಸದಿಲ್ಲಿ: ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ‘ಫ್ಲೈಯಿಂಗ್ ಕಿಸ್’ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಂಸದೆ ಶೋಭಾ ಕರಂದ್ಲಾಜೆ ಅವರು 21 ಮಹಿಳಾ ಬಿಜೆಪಿ ಸದಸ್ಯರ ಸಹಿ ಇರುವ ಪತ್ರವನ್ನು ಸ್ಪೀಕರ್ ಚೇಂಬರ್‌ನಲ್ಲಿ ಸಲ್ಲಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ‘ಫ್ಲೈಯಿಂಗ್ ಕಿಸ್’ ಕೊಟ್ಟಿರುವುದನ್ನು ನಾನು ನೋಡಿಲ್ಲ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಹೇಳಿದ್ದಾರೆ.
ವಿಪರ್ಯಾಸವೆಂದರೆ, ಶೋಭಾ ಕರಂದ್ಲಾಜೆ ಅವರು ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಿರುವ ಪತ್ರದಲ್ಲಿ ಸಂಸದೆ ಹೇಮಾಮಾಲಿನಿ ಅವರ ಸಹಿಯೂ ಇದೆ. ಅಲ್ಲದೆ, ಸ್ಪೀಕರ್ ರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹೇಮಾ ಮಾಲಿನಿ ಕೂಡ ಇದ್ದರು ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಇದರ ಬೆನ್ನಲ್ಲೇ ತಾನು ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಡುತ್ತಿರುವುದನ್ನು ನೋಡಿಲ್ಲ ಎಂದು ಹೇಮಾಮಾಲಿನಿ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿದ್ದಾರೆ.
ರಾಹುಲ್ ಗಾಂಧಿ ಅವರು ಮಣಿಪುರದ ವಿಚಾರದಲ್ಲಿ ಮಾಡಿರುವ ಭಾಷಣದಿಂದ ಜನರ ಗಮನ ಬೇರೆಡೆ ಸೆಳೆಯಲು ಹಾಗೂ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ ಮಾಡಿದ ಯೋಜನೆ ಎಂದು ಹಲವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಂಸತ್ತಿನಲ್ಲಿ ತಮ್ಮ ಭಾಷಣದ ಬಳಿಕ ನಿರ್ಗಮಿಸುತ್ತಿದ್ದಾಗ ಸಚಿವೆ ಸ್ಮೃತಿ ಇರಾನಿಯ ಕಡೆಗೆ ‘ಫ್ಲೈಯಿಂಗ್ ಕಿಸ್’ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ.