ಉಡುಪಿ: ಹೋಪ್ ಇಂಡಿಯಾ ಫೌಂಡೇಶನ್ ಲಾಂಛನ ಅನಾವರಣ
ಉಡುಪಿ (ಉಡುಪಿ ಟೈಮ್ಸ್ ವರದಿ) : ಮನುಷ್ಯ ಜೀವನಕ್ಕೆ ಅನ್ನ ಮತ್ತು ಆರೋಗ್ಯ ಅತ್ಯಗತ್ಯವಾಗಿದೆ. ಕೆಲವೊಂದು ಘಟನೆಗಳು ನಮ್ಮ ಜೀವನಕ್ಕೆ ಪಾಠವಾಗುತ್ತವೆ. ಅದರಂತೆ ಕೊರೊನಾ ಮಹಾಮಾರಿ ನಮಗೆಲ್ಲರಿಗೂ ಒಳ್ಳೆಯ ಪಾಠ ಕಲಿಸಿದೆ. ಹಾಗೆಯೇ ಉಡುಪಿಯ ಸಾಮಾಜಿಕ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಯಾವುದೇ ಸಮಸ್ಯೆಯಾಗದಂತೆ ಕಷ್ಟಕಾಲದಲ್ಲಿ ಜನರಿಗೆ ಸ್ಪಂದಿಸುತ್ತಾರೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದರು.
ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ನೇತೃತ್ವದ ಹೋಪ್ ಇಂಡಿಯಾ ಫೌಂಡೇಶನ್ ನ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಅನ್ಸಾರ್ ಅಹ್ಮದ್ ರವರ ಸೇವೆಯನ್ನು ಹತ್ತಿರದಿಂದ ನಾನು ಗಮನಿಸಿದ್ದೇನೆ. ಕಳೆದ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ದಿನಗಳಲ್ಲಿಯೂ ಕಷ್ಟದಲ್ಲಿದ್ದವರಿಗೆ ಊಟವನ್ನು ನೀಡಿದ್ದು ಮಾತ್ರವಲ್ಲದೆ ಇತ್ತೀಚೆಗೆ ಉಡುಪಿ ಜಿಲ್ಲೆಗೆ ಸೈನಿಕರ ತರಬೇತಿ ಸಮಯದಲ್ಲೂ ಊಟದ ವ್ಯವಸ್ಥೆ ಮಾಡಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ನೇತೃತ್ವದ ಹೋಪ್ ಇಂಡಿಯಾ ಫೌಂಡೇಶನ್ ಬಡವರಿಗೆ ಮತ್ತು ಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ಶುಭ ಹಾರೈಸಿದರು.
ಹೋಪ್ ಇಂಡಿಯಾ ಫೌಂಡೇಶನ್ ನ ಮುಖ್ಯಸ್ಥ ಅನ್ಸಾರ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಟ್ರಸ್ಟ್ ಕಡು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮೀಸಲಾಗಿದೆ. ಕಳೆದ ಹಲವು ಸಮಯಗಳಿಂದ ಟ್ರಸ್ಟ್ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಮ್ಮ ಸಂಸ್ಥೆಯನ್ನು ಉದ್ಘಾಟಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಾ. ಎ ವಿ ಬಾಳಿಗಾ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಡಾ. ಪಿ ವಿ ಭಂಡಾರಿ, ಸಮಾಜ ಸೇವಕ ಅಮೃತ್ ಶೆಣೈ, ತೋನ್ಸೆ ಹೆಲ್ತ್ ಸೆಂಟರ್ ನ ಮುಖ್ಯಸ್ಥ ಬಿ ಎಂ ಜಾಫರ್ ತೋನ್ಸೆ, ಪತ್ರಕರ್ತ ಕಾರ್ತಿಕ್ ಕುಂದರ್, ಉಡುಪಿ ಟೈಮ್ಸ್ ಮಾಧ್ಯಮದ ಪ್ರವರ್ತಕ ಸ್ಟೀವನ್ ಕುಲಾಸೊ, ಆರ್ ಜೆ ಎರೋಲ್ ಮತ್ತಿತರರು ಉಪಸ್ಥಿತರಿದ್ದರು.