ಉಪ್ಪಿನಂಗಡಿ: ಟಾಟಾ ಏಸ್ ಹಾಗೂ ಟ್ರಕ್ ಮುಖಾಮುಖಿ ಓರ್ವ ಸಾವು
ಉಪ್ಪಿನಂಗಡಿ(ಉಡುಪಿ ಟೈಮ್ಸ್ ವರದಿ): ಟಾಟಾ ಏಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು(ಏ.5) ಉಪ್ಪಿನಂಗಡಿಯ ಶಿರಾಡಿ ಗ್ರಾಮದ ಉದಾನೆ ಪರವರ ಕೊಟ್ಯ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಕುಕ್ಕಾಜೆ ಮೂಲದ ಹನೀಫ್ (56) ಮೃತಪಟ್ಟವರು. ಘಟನೆಯಲ್ಲಿ ಟಾಟಾಏಸ್ ನಲ್ಲಿದ್ದ ರಫೀಕ್ ಮತ್ತು ಕರೀಮ್ ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಮತ್ತು ಬೀಡಿ ವ್ಯಾಪಾರಕ್ಕಾಗಿ ಹಾಸನಕ್ಕೆ ತೆರಳುತ್ತಿದ್ದ ಟಾಟಾಏಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಹನೀಫ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.