ಕಾರ್ಕಳ: ಬ್ಯಾಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಲಕ್ಷಾಂತರ ರೂಪಾಯಿ ನಷ್ಟ
ಕಾರ್ಕಳ(ಉಡುಪಿ ಟೈಮ್ಸ್ ವರದಿ): ಬ್ಯಾಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ ನಷ್ಟ ಉಂಟಾಗಿರುವ ಘಟನೆ ಕಾರ್ಕಳದಲ್ಲಿ ಇಂದು(ಏ.5) ನಸುಕಿನ ಜಾವ ನಡೆದಿದೆ. ನಿಟ್ಟೆ ಗ್ರಾಮದ ಗುಂಡ್ಯಡ್ಕ ಬಳಿಯ ರಶ್ಮಿ ಭಟ್ ಕುಕ್ಕುಂದೂರು ಎಂಬವರಿಗೆ ಸೇರಿದ ಪ್ಯಾಕೇಜಿಂಗ್ ಇಂಡಸ್ಟ್ರಿನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ
.
ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆಗೆ ಫ್ಯಾಕ್ಟರಿ ಸಂಪೂರ್ಣ ಸುಟ್ಟು ಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ 3 ಪ್ರಿಂಟಿಂಗ್ ಮೆಷಿನ್, 13 ಹೊಲಿಗೆ ಯಂತ್ರ ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಘಟನೆಯಿಂದ ಸುಮಾರು 80 ಲಕ್ಷ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ, ದಫೆದಾರ್ ಅಚ್ಚುತ್, ಉದಯಕುಮಾರ್, ಸಿಬ್ಬಂದಿಗಳಾದ ಚಂದ್ರಶೇಖರ್, ಕಲ್ಲಪ್ಪ, ಸುರೇಶ್ ಕುಮಾರ್, ಸುಜಯ, ಹಸ್ಸನ್ ಸಾಬ್ ಮುಲ್ತಾನಿ, ಸಚಿನ್, ಶಿವಯ್ಯ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.