ಕಾಪು: ಮನೆ ಕೆಲಸಕ್ಕೆಂದು ತೆರಳಿದ ಮಹಿಳೆ ಮಗಳೊಂದಿಗೆ ನಾಪತ್ತೆ
ಕಾಪು(ಉಡುಪಿ ಟೈಮ್ಸ್ ವರದಿ): ಮನೆ ಕೆಲಸಕ್ಕೆ ಹೋಗಿದ್ದ ತಾಯಿ ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ಕಾಪು ಪಡು ಗ್ರಾಮದಲ್ಲಿ ನಡೆದಿದೆ. ಅನ್ನಪೂರ್ಣ(32) , ರೇಣುಕಾ(7) ನಾಪತ್ತೆಯಾಗಿರುವ ತಾಯಿ ಮಗಳು. ಅನ್ನ ಪೂರ್ಣ ಅವರು ತಮ್ಮ ಗ್ರಾಮದ 2-3 ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಹೋಗುವಾಗ ಮಗಳು ರೇಣುಕಾ(7) ರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.
ಅದರಂತೆ ಏ.1 ರಂದು ಮನೆ ಕೆಲಸಕ್ಕೆ ತೆರಳಿದ್ದು, ಅಂದು ಸಂಜೆ ಅನ್ನಪೂರ್ಣ ಅವರ ಗಂಡ ಪರಶುರಾಮ ಮನೆಗೆ ಬಂದು ನೋಡಿದಾಗ ಹೆಂಡತಿ ಮತ್ತು ಮಗಳು ಇಬ್ಬರೂ ಮನೆಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ಈ ವೇಳೆ ಪರಶುರಾಮ ಅವರು, ಪತ್ನಿ ಕೆಲಸ ಮಾಡುವ ಮನೆಯವರಲ್ಲಿ ವಿಚಾರಿಸಿದಾಗ ಅಲ್ಲಿ ಮದ್ಯಾಹ್ನ ಕೆಲಸ ಮುಗಿಸಿ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಅವರು ಸಂಬಂಧಿಕರು, ನೆರೆಕರೆಯಲ್ಲಿ ವಿಚಾರಿಸಿದಾಗಲೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಮಗು ನಾಪತ್ತೆ ಪ್ರಕರಣ ದಾಖಲಾಗಿದೆ