ಮಂಗಳೂರು:ಮಸೀದಿ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ
ಮಂಗಳೂರು(ಉಡುಪಿ ಟೈಮ್ಸ್ ವರದಿ) : ಸುರತ್ಕಲ್ ಸಮೀಪದ ಕೃಷ್ಣಾಪುರ ಜನತಾ ಕಾಲೊನಿಯ ಮಸೀದಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಏ.4 ರ ತಡರಾತ್ರಿ ನಡೆದಿದೆ. ಕೃಷ್ಣಾಪುರದ ಸಾದುಲಿ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಮ್ ಮದರಸ ಕಟ್ಟಡದ ಮೇಲೆ ತಡರಾತ್ರಿ 2.30 ರ ಸುಮಾರಿಗೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನೆಯಿಂದ ಮಸೀದಿಯ ಕಿಟಕಿ ಗಾಜುಗಳು ಒಡೆದಿದ್ದು, ಅಪಾರ ಹಾನಿ ಕೂಡ ಸಂಭವಿಸಿದೆ. ನಿನ್ನೆ ರಜಾ ದಿನವಾದ್ದರಿಂದ ರಾತ್ರಿ ಸುಮಾರು 1.30 ಗಂಟೆ ವರೆಗೆ ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಆ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ತೆರಳಿದ್ದು, ನಂತರ ಈ ಘಟನೆ ನಡೆದಿದೆ. ಈ ಬಗ್ಗೆ ಸಮಿತಿ ಕಾರ್ಯದರ್ಶಿ ದಾವೂದ್ ಹಕೀಂ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.