ಉಡುಪಿ: ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದಲ್ಲಿ ಶಿಲಾಯುಗ ಕಾಲದ ಗುಹಾ ಸಮಾಧಿ ಪತ್ತೆ
ಉಡುಪಿ: ಇತ್ತೀಚೆಗೆ ಉಡುಪಿಯ ಪಣಿಯಾಡಿಯಲ್ಲಿರುವ ಪುತ್ತಿಗೆ ಮಠದ ಅನಂತ ಪದ್ಮನಾಭ ದೇವಾಲಯದ ನವೀಕರಣದ ಸಮಯದಲ್ಲಿ ಗುಹಾ ಸಮಾಧಿಯೊಂದು ಪತ್ತೆಯಾಗಿದೆ. ಇದು ಶಿಲಾಯುಗ ಕಾಲದ ಗುಹಾ ಸಮಾಧಿ ಎಂದು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ. ಈ ಗುಹೆಯು 8 ಅಡಿ ವಿಸ್ತೀರ್ಣದಲ್ಲಿ ಹಂಡೆಯ ರೀತಿ ಇದೆ. ಮಣ್ಣು ಕುಸಿದಿದ್ದರಿಂದ ಅವಶೇಷ ಸಂಗ್ರಹಣೆ ಸಾಧ್ಯವಾಗಿಲ್ಲ. ಇನ್ನು ನೆಲಮಟ್ಟದಿಂದ ಸುಮಾರು 3 ಅಡಿ ಆಳದಲ್ಲಿ ಈ ಗುಹೆಯಲ್ಲಿ ಎರಡು ಅಡಿ ಸುತ್ತಳತೆಯ ಪ್ರವೇಶ ದ್ವಾರ ಕಂಡು ಬಂದಿದೆ ಎಂದು ವರದಿಯಾಗಿದೆ.
ಸಾಂತೂರಿನ ಸಮಾಧಿಯಲ್ಲಿ ಮಡಕೆ ಅವಶೇಷಗಳು ಪತ್ತೆಯಾಗಿದ್ದವು. ಸ್ಥಳೀಯ ಅಧ್ಯಯನದಲ್ಲಿ ರಾಜೇಶ ಭಟ್ ಪಣಿಯಾಡಿ ಅವರು ಸಹಕರಿಸಿದ್ದರು. ಇದೇ ರೀತಿ ಪಾವಂಜೆಯ ಸುಬ್ರಹ್ಮಣ್ಯ ದೇವಾಲಯ, ಸಾಂತೂರಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಸೂಡಾದ ಸುಬ್ರಹ್ಮಣ್ಯ ದೇವಾಲಯಗಳ ಸಮೀಪದಲ್ಲೂ ಗುಹಾ ಸಮಾಧಿಗಳು ಪತ್ತೆಯಾಗಿವೆ.