ಕಾಪುವಿನಲ್ಲಿ ಕೂಡಲೇ ಸಬ್ ರಿಜಿಸ್ಟ್ರಾರ್ ಕಛೇರಿ ತೆರೆಯಲು ಮೆಲ್ವಿನ್ ಡಿಸೋಜ ಆಗ್ರಹ
ಶಿರ್ವ ಜೂ.23(ಉಡುಪಿ ಟೈಮ್ಸ್ ವರದಿ): ಹೊಸ ಕಾಪು ತಾಲೂಕು ಆಗಿ ಸುಮಾರು 5 ವರ್ಷಗಳೇ ಕಳೆದರೂ ಇನ್ನೂ ಕೂಡಾ ಕಾಪುವಿನಲ್ಲಿ ಹೊಸ ಸಬ್‌ರಿಜಿಸ್ಟ್ರಾರ್ ಕಛೇರಿಯ ಆರಂಭ ಆಗದೇ ಇರುವುದನ್ನು ನ್ಯಾಯವಾದಿ ಹಾಗೂ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಪು ತಾಲೂಕಿನ ಜನರು ಉಡುಪಿ ಅಥವಾ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಛೇರಿಗೆ ಹೋಗಿ ದಸ್ತಾವೇಜು ನೊಂದಾಯಿಸಬೇಕಾಗಿದೆ. ಮುಲ್ಕಿಗೆ ಹೋಗಲು ಟೋಲ್ ಕಟ್ಟಬೇಕಾಗಿದೆ. ಕಾಪು ತಾಲೂಕಿಗೆ ಹೊಸ ಕಟ್ಟಡ ನಿರ್ಮಾಣವಾದರೂ ಕಾಮಗಾರಿ ಸಂಪೂರ್ಣ ಆಗದೇ ಇನ್ನೂ ಕೂಡಾ ಅಲ್ಲಿಗೆ ಯಾವುದೇ ಕಛೇರಿಗಳು ವರ್ಗಾವಣೆ ಆಗಿರುವುದಿಲ್ಲ. ಕಾಪು ತಾಲೂಕಿನ ಅನೇಕ ಕಡತಗಳು ಇನ್ನೂ ಕೂಡಾ ಉಡುಪಿ ತಾಲೂಕು ಕಛೇರಿಯಲ್ಲಿಯೇ ಇದ್ದು ಕಾಪುವಿಗೆ ವರ್ಗಾವಣೆ ಆಗದೇ ಇರುವುದು ಹಿಂದಿನ 5 ವರ್ಷ ಕೆಲಸ ಮಾಡಿದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ.
ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಕಾಪುವಿಗೆ ಹೊಸ ಸಬ್ ರಿಜಿಸ್ಟಾçರ್ ಕಛೇರಿ ಸ್ಥಾಪನೆ ಎಂದು ಪತ್ರಿಕೆಯಲ್ಲಿ ಬಂದಿರುವುದು ಈಗ ರಚನೆಯಾಗದೇ ಇರುವುದು ಕೇವಲ ಚುನಾವಣಾ ಗಿಮಿಕ್ ಎಂದು ಸ್ಪಷ್ಟವಾಗಿದೆ. ಜನರು ಒಮ್ಮೆ ಉಡುಪಿಗೆ ಮತ್ತೊಮ್ಮೆ ಕಾಪುವಿಗೆ ಅಲೆದಾಡುವಂತಾಗಿದೆ. ಆದ್ದರಿಂದ ಕೂಡಲೇ ಕಾಪುವಿನಲ್ಲಿ ಹೊಸ ಸಬ್ ರಿಜಿಸ್ಟ್ರಾರ್ ಕಛೇರಿ ಹಾಗೂ ಕಾಪು ತಾಲೂಕಿಗೆ ಸಿಗಬೇಕಾದ ಸೌಲಭ್ಯಗಳು ಕೂಡಲೇ ಸಿಗುವಂತೆ ಮಾಡಲು ಈಗಿನ ಶಾಸಕರು ಶ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯವರ ಕನಸಿನ ಕೂಸು ಕಾಪು ತಾಲೂಕು ಅವರ ಅನುಪಸ್ಥಿತಿಯಲ್ಲಿ ಸೌಲಭ್ಯ ವಂಚಿತವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಯ ಹರಿಕಾರ ವಿನಯ್ ಕುಮಾರ್ ಸೊರಕೆಯವರು ಶಾಸಕರಾಗಿದ್ದಲ್ಲಿ ಕಾಪು ತಾಲೂಕು ಎಲ್ಲಾ ಸೌಲಭ್ಯಗಳನ್ನು ಹೊಂದಿದ ಹೊಸ ತಾಲೂಕು ಆಗಿ ಮೂಡಿ ಬರುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ ಹಾಗೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರಿಗೆ ಕೂಡಾ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಮೆಲ್ವಿನ್ ಡಿಸೋಜ ತಿಳಿಸಿದ್ದಾರೆ.