ಸಬ್ ರಿಜಿಸ್ಟ್ರಾರ್ ಕಛೇರಿಯ ಕಾವೇರಿ ತಂತ್ರಾಂಶ ಸಮಸ್ಯೆ ಬಗೆಹರಿಸಲು ನ್ಯಾ. ಮೆಲ್ವಿನ್ ಡಿಸೋಜ ಆಗ್ರಹ
ಉಡುಪಿ ಜೂ.24(ಉಡುಪಿ ಟೈಮ್ಸ್ ವರದಿ): ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಸರಾಗವಾಗಿ ನಡೆಯುತ್ತಿದ್ದ ನೊಂದಣಿ ಕಾರ್ಯ ಹೊಸ ತಂತ್ರಾಂಶದಿಂದಾಗಿ ನ್ಯಾಯವಾದಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ನ್ಯಾಯವಾದಿ ಮೆಲ್ವಿನ್ ಡಿಸೋಜ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜೂನ್‌ನಿಂದ ಹೊಸ ತಂತ್ರಾಂಶದಡಿ ನೋಂದಣಿ ಕಾರ್ಯ ಎಂದು ತಿಳಿಸಲಾಗಿದೆ, ಆದರೆ ಈ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಸರ್ವರ್‌ನಲ್ಲಿ ಅನೇಕ ದೋಷಗಳಿದ್ದು, ದಸ್ತಾವೇಜು ತಯಾರಿಸುವವರಿಗೆ ಸರಿಯಾದ ಮಾಹಿತಿಯನ್ನು ನೀಡಿರುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಲು ಯಾವುದೇ ಸಹಾಯವಾಣಿಯನ್ನು ತೆರೆದಿರುವುದಿಲ್ಲ. ಜಾಗದ ರಿಜಿಸ್ಟ್ರೇಷನ್, ಮುಖ್ಯವಾಗಿ ಸಾಲದ ಬಗ್ಗೆ ರಿಜಿಸ್ಟ್ರಾರ್ ಕಛೇರಿಯಲ್ಲಿ ಮಾರ್ಟ್ಗೇಜ್ ಮಾಡಲು ಜನರು ಕಾಯುವಂತಾಗಿದೆ ಅಲ್ಲದೆ ಕೆಲವರು ಸಬ್ ರಿಜಿಸ್ಟ್ರಾರ್ ಕಛೇರಿಗೆ ಅಲೆದು ಸುಸ್ತಾಗಿದ್ದಾರೆ ಎಂದು ಹೇಳಿದ್ದಾರೆ.
ಹಾಗೂ ಸರ್ವರ್‌ನಲ್ಲಿ ದಾಖಲೆ ಅಪ್ಲೋಡ್ ಮಾಡಿದರೂ ಪ್ರಕ್ರಿಯೆ ಸರಾಗವಾಗಿ ಆಗುತ್ತಿಲ್ಲ. ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗಿದ್ದು, ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗಿದೆ. ಸಾಲ ಪಡೆಯಲು ಅತೀ ಅಗತ್ಯವಿರುವ ಋಣಭಾರ ಪ್ರಮಾಣ ಪತ್ರ ಕೂಡಾ ಸರಿಯಾಗಿ ಸಿಗುತ್ತಿಲ್ಲ. ಜನರು ಹೊಸ ಸರ್ವರ್‌ನಿಂದಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆನ್ ಲೈನ್ ಸಿಸ್ಟ್ಟಮ್ ಎಂದು ಹೇಳಿದ್ದರೂ ಪದೆ ಪದೇ ಸಬ್ ರಿಜಿಸ್ಟ್ರಾರ್ ಕಛೇರಿಗೆ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇಷ್ಟೆಲ್ಲಾ ಸಮಸ್ಯೆ ಇರುವ ಸಾಫ್ಟ್ವೇರ್ ಬೇಡವೇ ಬೇಡ ಎಂದು ನ್ಯಾಯವಾದಿಗಳು ಮತ್ತು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ. ಆದುದರಿಂದ ಹೊಸ ಕಾವೇರಿ ತಂತ್ರಾಂಶ ಸರಿಯಾಗುವವರೆಗೆ ಹಳೆಯ ತಂತ್ರಾಂಶ ದಲ್ಲಿಯೇ ನೊಂದಣಿ ಮಾಡಬೇಕು. ಇಲ್ಲದ್ದಿದ್ದಲ್ಲಿ ಹೊಸ ತಂತ್ರಾಂಶವನ್ನು ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನು ಮುಂದುವರೆಸಬೇಕೆಂದು ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದರ ಜೊತೆಗೆ ಈ ಬಗ್ಗೆ ಕಂದಾಯ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.