ಉಡುಪಿ: ಆನ್ಲೈನ್ ಜಾಬ್ ಆಮಿಷ- ವ್ಯಕ್ತಿಗೆ 1.28 ಲ.ರೂ. ವಂಚನೆ
ಉಡುಪಿ ಜೂ.21(ಉಡುಪಿ ಟೈಮ್ಸ್ ವರದಿ): ಆನ್ಲೈನ್ ಕೆಲಸದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 1.28 ಲಕ್ಷ ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಯಶೋಧರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಉದ್ಯೋಗ ಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದಾಗ, ಟೆಲಿಗ್ರಾಮ್ ಆ್ಯಪ್ ನಲ್ಲಿ ಆನ್ಲೈನ್ ಮೂಲಕ ಕೆಲಸದ ಮೂಲಕ ಹಣ ಗಳಿಸುವ ಬಗ್ಗೆ ಕಂಡ ಲಿಂಕವೊಂದನ್ನು ಸಂಪರ್ಕಿಸಿದರು. ಲಿಂಕ್ ನಲ್ಲಿ I-GLOBAL (i-global-review.net/#/pages/index/index) ಎಂಬ ವೆಬ್ ಸೈಟ್ ನಲ್ಲಿ ಟಾಸ್ಕ್ ಇದ್ದು, ಅದರಲ್ಲಿರುವ ಕೆಲವೊಂದು ಪ್ರೋಡಕ್ಟ್ ಗಳಿಗೆ ರೇಟಿಂಗ್ ಕೊಟ್ಟಲ್ಲಿ ಹಣ ಬರುತ್ತದೆ ಎಂದು ನಂಬಿಸಲಾಗಿತ್ತು. ಹಾಗೂ ಅದಕ್ಕೆ ಪ್ರಥಮವಾಗಿ ರೂ.10,900 ಹಣವನ್ನು ಡಿಪಾಸಿಟ್ ಮಾಡುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ಯಶೋಧರ ಅವರು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 1,28,151 ರೂ. ಹಣವನ್ನು ಡಿಪಾಸಿಟ್ ಮಾಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನು ನೀಡದೇ, ವರ್ಗಾವಣೆ ಮಾಡಿರುವ ಹಣವನ್ನು ವಾಪಾಸು ನೀಡದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.