ಹೆಬ್ರಿ: ಅಕ್ರಮ ಜಾನುವಾರು ಸಾಗಾಟ- ಇಬ್ಬರು ಪರಾರಿ
ಹೆಬ್ರಿ ಜೂ.21(ಉಡುಪಿ ಟೈಮ್ಸ್ ವರದಿ): ವರಂಗ ಗ್ರಾಮದ ತಲೆಮನೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣಾ ಪೊಲೀಸರು, ವರಂಗ ಗ್ರಾಮದ ತಲೆಮನೆ ಮುನಿಯಾಲು ರಸ್ತೆಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ ವೇಳೆ ಕಬ್ಬಿನಾಲೆ ಮತ್ತಾವು ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು ಪೊಲೀಸರನ್ನು ನೋಡಿ ಅಲ್ಲಿಯೇ ವಾಹನವನ್ನು ವಾಪಾಸ್ಸು ಕಬ್ಬಿನಾಲೆ ಮತ್ತಾವು ಕಡೆಯ ರಸ್ತೆಗೆ ತಿರುಗಿಸಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದನು. ಈ ವೇಳೆ ಪೊಲೀಸರು ಅನುಮಾನಗೊಂಡು ವಾಹನವನ್ನು ಬೆನ್ನಟ್ಟಿದ್ದು, ವರಂಗ ಗ್ರಾಮದ ತಲೆಮನೆ ಎಂಬಲ್ಲಿ ತಲುಪಿದಾಗ ವಾಹನದಲ್ಲಿದ್ದ ಇಬ್ಬರು ಆರೋಪಿತರು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಯದ್ವತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಕಟ್ಟಿರುವುದು ಕಂಡು ಬಂದಿದೆ.
ಆರೋಪಿತರುಗಳು ಈ ಜಾನುವಾರುಗಳನ್ನು ಕಳವು ಮಾಡಿಕೊಂಡು ವಾಹನದಲ್ಲಿ ತುಂಬಿಸಿ ಕಸಾಯಿ ಖಾನೆಗೆ ತೆಗೆದು ಕೊಂಡು ಹೋಗುತ್ತಿದ್ದರು ಎಂಬುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.