ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಆಹಾರ ಕಿಟ್ ವಂಚನೆ: ಕಾರ್ಕಳ ಶಾಸಕರ ರಾಜೀನಾಮೆಗೆ ಆಗ್ರಹ

ಉಡುಪಿ (ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಕಳಕ್ಕೆ 5000 ಸಾವಿರ ಆಹಾರ ಕಿಟ್ ವಿತರಿಸಲು ರೂ. 44,95,000/ ಬಿಡುಗಡೆ ಮಾಡಿದ್ದು ಈ ಆಹಾರ ಕಿಟ್ ನ್ನು ನ್ಯಾಯಯುತವಾಗಿ ಕಾರ್ಕಳ ಶಾಸಕರು ತಮ್ಮದೇ ಸರ್ಕಾರಕ್ಕೆ ಮತ್ತು ಜನರಿಗೆ ದ್ರೋಹ ಬಗೆದಿದ್ದಾರೆ. ಆದ್ದರಿಂದ ಶಾಸಕರು. ತಕ್ಷಣ ರಾಜೀನಾಮೆ ನೀಡುವಂತೆ ಕಾರ್ಕಳ ಪುರಸಭಾ ಸದಸ್ಯರಾದ ಶುಭದ ರಾವ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತ ಅವರು ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಕಾರಿಯಾಗುವಂತೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಅವರು 13 ಆಹಾರ ಪದಾರ್ಥಗಳನ್ನು ಒಳಗೊಂಡು ಒಂದು ಕಿಟ್ ಗೆ ರೂ. 899/- ರಂತೆ 5000 ಕಿಟ್ ಗೆ ರೂ 44,95,000 /- ಬಿಡುಗಡೆ ಮಾಡಿದೆ. ಕಿಟ್ ನ್ನು ಪಡೆದ ಫಲಾನುಭವಿಗಳ ವಿವರಗಳನ್ನು ಮಾಹಿತಿ ಹಕ್ಕಿನ ಮೂಲಕ ಪಡೆದು ಪರಿಶೀಲಿಸಿದಾಗ ಇದೊಂದು ಬೊಗಸ್ ಪಟ್ಟಿಯೆಂದೂ ಮತ್ತು ಈ ಬೊಗಸ್ ಪಟ್ಟಿಯ ಮೂಲಕ ಅವ್ಯವಹಾರ ನಡೆಸಿ ಸರ್ಕಾರಕ್ಕೆ ಮತ್ತು ಜನತೆಗೆ ವಂಚಿಸಲಾಗಿದೆ. ಪಟ್ಟಿಯಲ್ಲಿ ಕಿಟ್ ನ್ನು ಪಡೆಯದೆ ಇದ್ದವರಿಗೆ, ಇನ್ನಾವುದೋ ಯೋಜನೆಯ ಫಲಾನುಭವಿಗಳು ಮತ್ತು ಅದಕ್ಕಿಂತಲೂ ಮಿಗಿಲಾಗಿ ಮೃತರಾದವರ ಹೆಸರು ಇರುವುದು ಕಂಡು ಬಂದಿದ್ದರಿಂದ ಅದು ಬೋಗಸ್ ಪಟ್ಟಿ ಎನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ಬಡವರ ಹೆಸರಿನಲ್ಲಿ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿದ್ದ ಶಾಸಕರು ಆ ಹಣದಲ್ಲಿ ಸುಮಾರು 350 ರೂ.ಗಳ ಸಣ್ಣ ಸಣ್ಣ ಆಹಾರ ಕಿಟ್‌ಗಳನ್ನು ಚಿನ್ನದ ಕೆಲಸಗಾರರಿಗೆ ,ಕ್ಷೌರಿಕರು ,ಮಡಿವಾಳರು, ರಿಕ್ಷಾ ಚಾಲಕ ಮಾಲಿಕರು, ಬಸ್ ಸಿಬ್ಬಂದಿಗಳು ಮತ್ತು ಇತರರಿಗೆ ವಿತರಿಸಿದ್ದು. ಈ ಹೆಸರನ್ನು ಕಾರ್ಮಿಕ ಇಲಾಖೆಗೆ ಸುಳ್ಳು ಮಾಹಿತಿ ಕಳುಹಿಸಿ, ಇವರೆಲ್ಲರಿಗೂ ರೂ. 899 /- ಇಲಾಖೆಗೆ ಕಿಟ್ ನ್ನು ನೀಡಲಾಗಿದೆ ಎಂದು ಬಡ ಕಾರ್ಮಿಕರಿಗೆ ಮತ್ತು ಇಲಾಖೆಗೆ ವಂಚಿಸಲಾಗಿದೆ ಎಂದು ದೂರಿದ್ದಾರೆ.

ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೋಟೇಷನ್ ಕೂಡ ನಕಲಿ ಮತ್ತು ಬೋಗಸ್ ಆಗಿದ್ದು. ಪಕ್ಷದ ಪದಾಧಿಕಾರಿಗಳಿಂದಲೇ ಕೋಟೇಷನ್ ಹಾಕಿಸಿ ಅವರನ್ನು ಬಲಿಪಶು ಮಾಡುವ ಮೂಲಕ ಸರಕಾರದ ಹಣವನ್ನು ಬಡವರ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ನೇರವಾಗಿ ಹಣ ಪಾವತಿ ಯಾಗಿದೆ ಅ ಏಜೆನ್ಸಿಯ ಮೂಲಕ ಪಕ್ಷದ ಪದಾಧಿಕಾರಿಗಳ ಬ್ಯಾಂಕ್ ಖಾತೆಗಳಿಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿರುವುದು ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯಾಗಿದೆ.

ಕೊರೊನಾ ವೈರಸ್ ಹಬ್ಬುತ್ತಿದೆ ಸಂದರ್ಭದಲ್ಲಿ ಬಡಜನರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರ ಹಸಿವು ನೀಗಿಸಲು ಸರ್ಕಾರ ಅಥವಾ ಇಲಾಖೆ ಬಿಡುಗಡೆಗೊಳಿಸಿದ ಆಹಾರ ಕಿಟ್‌ಗಳನ್ನು ಅಗತ್ಯದವರಿಗೆ ವಿತರಿಸುವುದು ಶಾಸಕರಾದವರ ಜವಾಬ್ದಾರಿಯಾಗಿರುತ್ತದೆ. ಆದರೆ ನಮ್ಮ ಶಾಸಕರು ಬಡವರ ಹೆಸರಿನಲ್ಲಿ ವಂಚಿಸಿರುವುದು ಇಡೀ ರಾಜ್ಯ ತಲೆತಗ್ಗಿಸುವಂತಾಗಿದೆ. ನಂಬಿಕೆಯಿಟ್ಟು ಆರಿಸಿ ಕಳಿಸಿದ ಮತದಾರರ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿರುವುದು ನಿಜಕ್ಕೂ ದುರಂತ, ಈ ಫಲಾನುಭವಿಗಳ ಪಟ್ಟಿ ಬೋಗಸ್ ಅಲ್ಲವೆಂದು ಸಾಬೀತುಪಡಿಸುವಂತೆ ಶಾಸಕರು ಕಾರ್ಕಳ ಜನತೆಯ ಪರವಾಗಿ ಸವಾಲು ಹಾಕಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಶುಭದರವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!