ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ?- ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು ಜೂ.19 : ಇನ್ನೂ ಕೆಲವೇ ದಿನಗಳಲ್ಲಿ ಕರ್ನಾಟಕವನ್ನು ದುಷ್ಟಶಕ್ತಿ ಮುಕ್ತ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಗುರಿಯಾಗಿಸಿ, ‘ಜ್ಞಾನೇಂದ್ರ ಅವರೇ ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
“ಅಂದಹಾಗೆ, ಕಲಬುರಗಿಯಲ್ಲಿ ಮರಳು ಮಾಫಿಯಾ ಹೆಸರಿನಲ್ಲಿ ಕಾನ್‌ಸ್ಟೆಬಲ್ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ, ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನೀಯರಿಗೆ ವಂಚಿಸಿ ಬ್ಲಾಕ್‌ಮೇಲ್ ಮಾಡಿದ ದುಷ್ಟನ ಬಗ್ಗೆ ತಾವು ಮಾತಾಡುವುದಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
‘ನಮ್ಮ ಸರ್ಕಾರ ಬಂದು ಒಂದು ತಿಂಗಳಾಗಿದೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿಯಲ್ಲಿ ಅಷ್ಟೇ ಅಲ್ಲ, ಕರ್ನಾಟಕದಲ್ಲಿಯೇ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ. ಕಲಬುರಗಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತ ಕಾನ್‌ಸ್ಟೆಬಲ್ ನನ್ನು ಕೊಲೆ ಮಾಡಿದ್ದಲ್ಲದೆ, ಬಂಧಿಸಲು ಹೋದ ಪೊಲೀಸರಿಗೆ ಚಾಕು ಹಾಕಲು ಹೋಗಿ ಗುಂಡೇಟು ತಿಂದು ಬಂಧಿಯಾಗಿದ್ದಾನೆ. ತಾವು ಆತನಿಗೆ ಜಾಮೀನು ನೀಡಿ ಬಿಡಿಸಲು ಪ್ರಯತ್ನಿಸದಿದ್ದರೆ ಸಾಕು, ಅದೇ ತಾವು ಕರ್ನಾಟಕಕ್ಕೆ ಮಾಡುವ ಉಪಕಾರ ಎಂದು ಟೀಕಿಸಿದ್ದಾರೆ.