ಎಂಜಿಎಂ ಸಂಧ್ಯಾ ಕಾಲೇಜಿನಲ್ಲಿ ಕುವೆಂಪು ಸಾಹಿತ್ಯ ದರ್ಶನ ಉಪನ್ಯಾಸ
ಉಡುಪಿ ಜೂ.19 : ಎಂಜಿಎಂ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳ್ಳಿ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನದ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ `ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ‘ ಎಂಬ ವಿಶೇಷೋಪನ್ಯಾಸ ಮಾಲೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ, ಉಡುಪಿ ಸರಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಧಾಕರ ದೇವಾಡಿಗ ಬಿ.ಕುವೆಂಪು ಅವರು ಪ್ರಕೃತಿ ಕವಿ ಎಂದೇ ಪ್ರಸಿದ್ದಿ ಪಡೆದವರು. ಪ್ರಕೃತಿಯೇ ದೇವರೆಂದು ಕಂಡವರು. ಅವರು ರಚಿಸಿದ ಸಾಧಿತ್ಯ ಕೃತಿಗಳು ನಮಗೆ ಪ್ರಕೃತಿಯ ಮಹತ್ವವನ್ನು ಮನದಟ್ಟು ಮಾಡುತ್ತವೆ. ಒಂದರ್ಥದಲ್ಲಿ ಇಂದಿನ ಎಲ್ಲಾ ತಲ್ಲಣಗಳಿಗೆ ಪ್ರಕೃತಿ ನಾಶವೇ ಕಾರಣ ಎಂದು ಹೇಳಿದರು.
ಪ್ರಕೃತಿಯೊಂದಿಗೆ ಕುವೆಂಪು ಅವರ ಜೀವನ ಒಂದೆಡೆಯಾದರೆ, ಸಾಹಿತ್ಯದ ಮೂಲಕ ಮೌಢ್ಯದ ವಿರುದ್ಧ ಅವರ ಹೋರಾಟ ಕಾಣ ಬಹುದು. ಧಾರ್ಮಿಕತೆಯ ಹೆಸರಿನಲ್ಲಿ ಕಂಡು ಬರುವ ಮೌಢ್ಯವನ್ನು ಅವರು ಬಲವಾಗಿ ವಿರೋಧಿಸಿದ್ದಾರೆ. ತಾನು ನಾಸ್ತಿಕನಲ್ಲವಾದರೂ, ವಿಜ್ಞಾನದ ದೀವಿಗೆ ಹಿಡಿದುಕೊಂಡು ಬನ್ನಿ ಎನ್ನುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಮೂಲಕ ಮೌಢ್ಯವನ್ನು ನಿರಾಕರಿಸಿದ್ದಾರೆ. ನಿರಂಕುಶ ಮತಿಗಳಾಗಿ ‘ ಎಂಬುದು ಕುವೆಂಪು ಅವರು ಯುವಕರಿಗೆ ನೀಡಿದ ಮತ್ತೊಂದು ಸಂದೇಶವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ಎಸ್. ನಾಯ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಅವರೇಕೆ ಮಹಾನ್ ಕವಿ ಎಂಬುದನ್ನು ಸಾಹಿತ್ಯ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಅವರ ಸಾಹಿತ್ಯದ ಅಧ್ಯಯನದ ಮೂಲಕ ಜೀವನದರ್ಶನವನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಅವರು ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ ‘ ಮಹಾಕಾವ್ಯದ ಪಂಚವಟಿ ಕಾವ್ಯ ಭಾಗವನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಸಂಯೋಜಕ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಆರ್‌ಆರ್‌ಸಿ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ, ಪ್ರೊ. ರೇವಣ್ಣ ಸಿದ್ಧಪ್ಪ. ಡಾ.ಮಹಾಲಿಂಗಯ್ಯ, ಪ್ರಕಾಶ್ ಜತ್ತನ್ನ, ರಾಘವೇಂದ್ರ ತುಂಗಾ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ನರಸಿಂಹಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.