ಜು. 1ರಂದು ಉಚಿತ ಅಕ್ಕಿ ಕೊಡದಿದ್ದರೆ ಪ್ರತಿಭಟನೆ : ಮಾಜಿ ಸಿಎಂ ಬೊಮ್ಮಾಯಿ ಎಚ್ಚರಿಕೆ

ಹುಬ್ಬಳ್ಳಿ, ಜೂ.18: ಒಂದು ವೇಳೆ ಒಂದನೇ ತಾರೀಖಿಗೆ ಅಕ್ಕಿ ಕೊಡದೆ ಹೋದರೆ, ನಾವು ಪ್ರತಿಭಟನೆ ಮಾಡುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಸಿದ್ದಾರೆ.

ಇಂದು ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ನೂತನ ಪ್ರೌಡಶಾಲೆ ಕಟ್ಟಡದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಅಕ್ಕಿಯನ್ನು ಎಲ್ಲಿಂದ ತೆಗೆದುಕೊಳ್ಳಬೇಕು, ಹೇಗೆ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆ ಇದೆ. ರಾಜ್ಯದ ರೈತರು ಅಕ್ಕಿ ಕೊಡುವುದಕ್ಕೆ ಮುಂದೆ ಬಂದರೆ ಅದನ್ನು ಖರೀದಿ ಮಾಡಬೇಕು. ಬಿಜೆಪಿಯವರೇ ಕೊಡಸಿ ಎನ್ನುವುದು ಸರಿಯಲ್ಲ. ಒಂದು ವೇಳೆ ಒಂದನೇ ತಾರೀಖಿಗೆ ಅಕ್ಕಿ ಕೊಡದೆ ಹೋದರೆ, ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.

ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೀಗ ಅಕ್ಕಿ ಸಿಗಲಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ. ಇದೀಗ ಛತ್ತೀಸಗಡದಿಂದ ಅಕ್ಕಿ ತರುತ್ತೇವೆ ಎನ್ನುತ್ತಿದ್ದಾರೆ. ನಮಗೆ ಬಡ ಜನರಿಗೆ ಒಳ್ಳೆಯದಾದರೆ ಸಾಕು ಎಂದರು.

ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದರೆ, ಸರಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ ಎಂದ ಅವರು, ನೀರು ಕೊಡದ ಸರಕಾರ ತಗೆದುಕೊಂಡು ಏನು ಮಾಡಬೇಕು. ಇನ್ನು ಇದೇ ವೇಳೆ ಅಧಿವೇಶನಕ್ಕೂ ಮುಂಚೆ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಅವರು ಸ್ಪಷ್ಟಣೆ ನೀಡಿದರು.

ಇದೇ ವೇಳೆ ಅವರು, ಕಳೆದ ವಾರ ನಾನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲಿ ಬರಗಾಲ ಇದೆ. 500 ಹಳ್ಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿ ಸುಮ್ಮನಾಗಿದೆ. ಬರಗಾಲ ಇದ್ದ ಕಡೆ ಟಾಸ್ಕಪೋರ್ಸ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!