ಉಡುಪಿ: ಬೆಕ್ಕಿನ ರಕ್ಷಣೆಗೆ ಖುದ್ದು ಬಾವಿಗಿಳಿದ ಪೇಜಾರ ಶ್ರೀ- ವ್ಯಾಪಕ ಶ್ಲಾಘನೆ
ಉಡುಪಿ ಜೂ.18: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸ್ವತಃ ಬಾವಿಗಿಳಿದು ಬೆಕ್ಕೊಂದನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ.
ಶ್ರೀಮಠದ ಸುಪರ್ದಿಗೊಳಪಡುವ ಮುಚ್ಚಿಲಗೋಡು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭಾನುವಾರ ಶ್ರೀಪಾದರು ತೆರಳಿದ್ದರು. ಅದೇ ವೇಳೆ ದೇವಳದ ಆವರಣದ ಬಾವಿಯಲ್ಲಿ ಬೆಕ್ಕೊಂದು ಬಿದ್ದಿರುವ ಸುದ್ದಿ ತಿಳಿದರು. ಈ ವೇಳೆ ಬೆಕ್ಕನ್ನು ಮೇಲಕ್ಕೆತ್ತಲು ಹರ ಸಾಹಸಪಟ್ಟರೂ ಅಸಾಧ್ಯವಾದಾಗ ಸ್ವತಃ ಶ್ರೀಪಾದರೇ ಸುಮಾರು 40 ಅಡಿ ಆಳದ ಸುಮಾರು 15 ಅಡಿಯಷ್ಟು ನೀರಿದ್ದ ಬಾವಿಗೆ ರಾಟೆಗೆ ಹಗ್ಗ ಬಿಗಿದು ಇಳಿದರು.
ನೀರಿನಲ್ಲಿ ನೆನೆದು ತೊಪ್ಪೆಯಾಗಿ ಆಕ್ರಂದನವೀಯುತ್ತಾ ಬಾವಿಯ ಅಂಕಣದಲ್ಲಿ ಕುಳಿತಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಕೆಟ್ ಒಂದನ್ನು ಇಳಿಸಿ ಅದರೊಳಗೆ ಕುಳ್ಳಿರಿಸಲು ಯತ್ನಿಸಿದರೂ ಜೀವ ಭಯದಿಂದ ಬೆಕ್ಕು ಚೆಂಗನೆ ಜಿಗಿಯಿತು!. ಬಳಿಕ ಮೇಲಿಂದ ಅಂಗವಸ್ತ್ರವೊಂದನ್ನು ಪಡೆದ ಶ್ರೀಪಾದರು ಕಿರಿದಾದ ಬಾವಿಯ ಅಂಗಣಗಳ ನಡುವೆ ನಿಂತು ಬೆಕ್ಕನ್ನು ಕೈಯ್ಯಲ್ಲಿಯೇ ಹಿಡಿದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿದರು.
ಬೆಕ್ಕಿನ ರಕ್ಷಣೆಗಾಗಿ ಬಾವಿಗಿಳಿದ, ಅದರಲ್ಲೂ ಹರಸಾಹಸಪಟ್ಟು ಜೀವಂತವಾಗಿ ಬೆಕ್ಕನ್ನು ಮೇಲಕ್ಕೆತ್ತಿರುವ ಶ್ರೀಪಾದರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.