ನೀರಿನ ಸಮಸ್ಯೆ ವಿರುದ್ಧ ಖಾಲಿ ಕೊಡಪಾನ ಹಿಡಿದು ಅಂಬಲಪಾಡಿ ಪಂಚಾಯತ್‌ಗೆ ಮುತ್ತಿಗೆ
ಉಡುಪಿ ಜೂ.17: ಉಡುಪಿ ನಗರಸಭಾ ವ್ಯಾಪ್ತಿಯ ಅಂಬಲಪಾಡಿ ಪಂಚಾಯತ್ ಪರಿಸರದಲ್ಲಿ ಕುಡಿಯುವ ನೀರಿನ ಪೂರೈಕೆ ಯಲ್ಲಿ ಉಂಟಾಗಿರುವ ಸಮಸ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ.
ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಬಜೆ ಡ್ಯಾಂನಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಉಡುಪಿ ನಗರ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಕೇವಲ ಮೂರು ಬಾರಿ ಮಾತ್ರವೇ ನೀರು ಪೂರೈಸಲಾಗುತ್ತಿದೆ. ಇದೀಗ ಕುಡಿಯುವ ನೀರಿನ ಸಮಸ್ಯೆ ಯಿಂದ ಕಂಗೆಟ್ಟಿರುವ ನಗರ ಸಭಾ ವ್ಯಾಪ್ತಿಯ ಅಂಬಲಪಾಡಿ ಪಂಚಾಯತ್ ಪರಿಸರದ ಮಹಿಳೆಯರು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಉಡುಪಿ ನಗರದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಗ್ರಾಮದಲ್ಲಿನ ಮನೆಗಳಿಗೆ ಕಳೆದ ಎರಡು ತಿಂಗಳಿನಿಂದಲೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂಧಿಗಳ ಬಳಿ ಕೇಳಿದ್ರೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಇದರಿಂದ ಕೆರಳಿದ ಗ್ರಾಮಸ್ಥರು ಇಂದು ಗ್ರಾಮ ಪಂಚಾಯತ್‌ಗೆ ನುಗ್ಗಿದ್ದಾರೆ.
ಆರಂಭದಲ್ಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತ್‌ಗೆ ನುಗ್ಗಿದ ಮಹಿಳೆಯರು ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆಯಲ್ಲಿ ಗ್ರಾಮ ಪಂಚಾಯತ್‌ಗೆ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಅವರ ಜೊತೆಗೆ ಧರಣಿ ನಿರತರು ವಾಗ್ವಾದ ನಡೆಸಿದ್ದಾರೆ. ಕಳೆದ ಎರಡು ತಿಂಗಳಿನಿಂದಲೂ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದ್ದರೂ ಕೂಡ ಗ್ರಾಮ ಪಂಚಾಯತ್ ಅಧ್ಯಕ್ಷರು ಒಮ್ಮೆಯೂ ಕೂಡ ಭೇಟಿ ನೀಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ ಮೂರು ದಿನಗಳಿಗೊಮ್ಮೆ ನೀರು ಬಿಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿಯನ್ನು ಗ್ರಾಮಸ್ಥರು ಕೈಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ರಂಜನ್ ಕಿದಿಯೂರು, ಯತಿರಾಜ್ ಕಿದಿಯೂರು, ಜನಾರ್ದನ ಕಿದಿಯೂರು, ದೇವರಾಜ್ ಕಿದಿಯೂರು, ಶಾರದಾ ಪೂಜಾರ್ತಿ, ಸುಮತಿ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.