ಮೀನುಗಾರರಿಗೆ ಮನೆ ಒದಗಿಸಲು ಯತ್ನ: ಸಚಿವ ಮಂಕಾಳ ವೈದ್ಯ
ಉಡುಪಿ, ಜೂ.16 :ಈ ಬಾರಿ ಇಡೀ ರಾಜ್ಯದಲ್ಲಿ ಅಗತ್ಯ ಇರುವ ಮೀನುಗಾರರಿಗೆ ಮನೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಮೀನುಗಾರರು ಮತ್ತು ಸಾರ್ವಜನಿಕರಿಗೆ ಕಡಲ್ಕೊರೆತದಿಂದ ಆಗುತ್ತಿರುವ ಸಮಸ್ಯೆಗಳ ಕುರಿತ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ 2017-18ರಲ್ಲಿ ಮೀನುಗಾರರಿಗೆ ಮಂಜೂರು ಮಾಡಿರುವ ಮನೆಗಳು ಇನ್ನೂ ಕೂಡ ಪೂರ್ತಿಯಾಗಿ ಮುಗಿದಿಲ್ಲ. ಅದರ ನಂತರ ಸರಕಾರ ಯಾವುದೇ ಮನೆಯನ್ನು ಮೀನುಗಾರರಿಗೆ ಕೊಟ್ಟಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮುದ್ರ ಕೊರೆತ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 40 ಕಿ.ಮೀ. ವ್ಯಾಪ್ತಿಯಲ್ಲಿ ಈ ಬಾರಿ ಕಡಲ್ಕೊರೆತ ಕಂಡುಬಂದಿದ್ದು, ಜಿಲ್ಲಾಡಳಿತ ಕೂಡ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಅದೇ ರೀತಿ ಕಡಲ್ಕೊರೆತಕ್ಕೆ ತಡೆಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ಕಡಲ್ಕೊರೆತ ತಡೆಗೆ ಕಲ್ಲು ಹಾಕಿರುವ ಗುತ್ತಿಗೆದಾರರ ಹಣ ಬಾಕಿ ಇರುವುದರಿಂದ ಈ ವರ್ಷ ಯಾರು ಕೂಡ ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿ ಕೂಡ ಕಾಮಗಾರಿ ನಿಂತಿಲ್ಲ. ಎಲ್ಲ ಕಡೆ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ಮೃತ ಮೀನುಗಾರ ಕುಟುಂಬಗಳಿಗೆ ನೀಡುವ ಸಂಕಷ್ಟ ಪರಿಹಾರ ನಿಧಿಯನ್ನು ಕಳೆದ ಒಂದು ವರ್ಷಗಳಿಂದ ಬಾಕಿ ಇರಿಸ ಲಾಗಿದ್ದು, ಅದನ್ನು ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಉಳ್ಳಾಲ ಮಾದರಿಯ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಾಮಗಾರಿಯನ್ನು ಉಡುಪಿ ಜಿಲ್ಲೆಯ ಮರವಂತೆ ನಾಗಬನ ಹಾಗೂ ಪಡುಬಿದ್ರಿಯ ನಡಿಪಟ್ಣ ಸೇರಿದಂತೆ ನಾಲ್ಕು ಕಡೆ ನಡೆಸಲು ಈಗಾಗಲೇ ಅಂದಾಜು ಯೋಜನೆ ಮಾಡಲಾಗಿದೆ.
ಮೀನುಗಾರರಿಗೆ ಅವಶ್ಯಕತೆ ಇದ್ದರೆ ಹಾಗೂ ಪ್ರಯೋಜನ ಆಗುವುದಾದರೆ ಸೀ ಆ್ಯಂಬುಲೆನ್ಸ್ ನಿಯೋಜಿಸುವ ಬಗ್ಗೆ ಯೋಚನೆ ಮಾಡಲಾಗುವುದು. ಗಂಗೊಳ್ಳಿಯಲ್ಲಿ ಕುಸಿದ ಜೆಟ್ಟಿ ಕಾಮಗಾರಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೂಡಲೇ ಸರಿಪಡಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮರವಂತೆ ಬ್ರೇಕ್ ವಾಟರ್ ಎರಡನೇ ಕಾಮಗಾರಿಗೆ ಸಂಬಂಧಿಸಿದ ಸಿಆರ್‌ಝೆಡ್ ಕ್ಲಿಯರೆನ್ಸ್ ಮಾಡಲು ನಿರ್ದೇಶನ ನೀಡಲಾಗಿದೆ. ಕೂಡಲೇ ಕ್ಲಿಯರೆನ್ಸ್ ಮಾಡಿ ಕಾಮಗಾರಿಯನ್ನು ಆರಂಭಿಸಲಾಗುವುದು. ಅದಕ್ಕೆ ಟೆಂಡರ್ ಕೂಡ ಆಗಿದೆ. ಯಾವುದೇ ಕಾಮಗಾರಿ ವಿಳಂಬ ಆಗಲು ನಾವು ಬಿಡುವುದಿಲ್ಲ. ಮೀನುಗಾರಿಗೆ ಅನುಕೂಲ ವಾಗುವ ಎಲ್ಲವನ್ನು ನಾವು ಮಾಡುತ್ತೇವೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸುವರ್ಣ ತ್ರಿಭುಜ ಬೋಟು ಅವಘಡಕ್ಕೆ ಸಂಬಂಧಿಸಿ ಈಗಾಗಲೇ ತನಿಖೆ ನಡೆಸಲಾಗಿದ್ದು, ಇದೀಗ ಇಡೀ ಪ್ರಕರಣ ವನ್ನು ಮುಚ್ಚಲಾಗಿದೆ. ಐದು ವರ್ಷಗಳ ಹಿಂದೆ ಆಗಿರುವ ಘಟನೆ ಬಗ್ಗೆ ನಾನು ಈಗ ಮಾತನಾಡಿದರೆ ರಾಜಕೀಯ ವಾಗುತ್ತದೆ. ಆ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಬೋಟು ಮಾಲಕರಿಗೆ ವಿಮೆ ಕ್ಲೈಮ್ ಆಗದಿದ್ದರೆ ಸರಿ ಮಾಡಲು ಸರಕಾರದಿಂದ ಸಹಕಾರ ನೀಡಲಾಗುವುದು. ಅದೇ ರೀತಿ ಅವರಿಗೆ ಬೋಟು ಒದಗಿಸಲು ಸರಕಾರದಿಂದ ಸಹಾಯ ಮಾಡುವ ಕಾರ್ಯ ಮಾಡಲಾಗುವುದು. ಪ್ರಕರಣದ ಬಗ್ಗೆ ತನಿಖೆ ಅಗತ್ಯ ಇದ್ದರೆ ಪ್ರಯತ್ನ ಮಾಡಲಾಗುವುದು ಎಂದರು.
‘ರಾಜ್ಯದ ಎಲ್ಲ ಬಂದರುಗಳಲ್ಲಿ ಶೌಚಾಲಯ ಮತ್ತು ಮೀನು ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮುಂದಿನ ತಿಂಗಳು ಪ್ರತಿಯೊಂದು ಕಡೆಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಇಲಾಖಾ ಧಿಕಾರಿಗಳು ಹಾಜರಿದ್ದರು.