ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸದ ಕೇಂದ್ರ- ‘ಬೀದಿಯಲ್ಲಿ ಅನ್ನ ಬೇಯಿಸಿ’ ಕಾಂಗ್ರೆಸ್‌ನಿಂದ ವಿಭಿನ್ನ ಪ್ರತಿಭಟನೆ
ಬೆಂಗಳೂರು, ಜೂ.16 : ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸದ ಕೇಂದ್ರದ ವಿರುದ್ಧ ‘ಬೀದಿಯಲ್ಲಿ ಅನ್ನ ಬೇಯಿಸಿ’ ವಿಭಿನ್ನ ರೀತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಇಂದು ಆನಂದ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಭವನದಲ್ಲಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರದ ಬಡವರ ವಿರೋಧಿ ನೀತಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಅನ್ನಭಾಗ್ಯ ಯೋಜನೆಗೆ ಕೂಡಲೇ ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುಖಂಡರು,ಬಿಜೆಪಿ ಮುಖಂಡರಿಗೆ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲು ತಾಕತ್ತು, ಧಮ್ಮು ಇಲ್ಲವೇ?, ಬಡವರ ಅನ್ನಭಾಗ್ಯ ಯೋಜನೆಗೆ ಮಣ್ಣು ಹಾಕುತ್ತಿರುವ ಕೇಂದ್ರ ಬಿಜೆಪಿ ಸರಕಾರದ ಇಬ್ಬಗೆ ನೀತಿ ನಿಜಕ್ಕೂ ಅಕ್ಷಮ್ಯ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.
‘ಅನ್ನಭಾಗ್ಯ’ ಯೋಜನೆಯಡಿ ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರೆ ಅಕ್ಕಿ ನೀಡದೆ ಸರಕಾರದ ಮನವಿ ತಿರಸ್ಕರಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ಬಡವರ ವಿರೋಧಿ ನೀತಿಯನ್ನು ಎತ್ತಿ ತೋರುತ್ತಿದೆ’ ಎಂದು ಟೀಕಿಸಿದರು.
ಭಾರತೀಯ ಆಹಾರ ಪ್ರಾಧಿಕಾರ (ಎಫ್‍ಸಿಐ)ಕ್ಕೆ ಹಣ ನೀಡಿ ಬೇಡಿಕೆ ಇಟ್ಟರು ಪ್ರಧಾನಿ ಮೋದಿ ಕರ್ನಾಟಕ ಸರಕಾರದ ಬೇಡಿಕೆಯನ್ನು ಗಮನಿಸದೆ ಇರುವುದು ದ್ವೇಷದ ರಾಜಕೀಯಕ್ಕೆ ಸಾಕ್ಷಿ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರ ಇದರ ವಿರುದ್ಧ ಧ್ವನಿ ಎತ್ತಬೇಕಿತ್ತು. ಆದರೆ, ಅವರೆಲ್ಲರೂ ನಿಷ್ಕ್ರಿಯರಾಗಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಮುಖಂಡರಾದ ಜಿ.ಜನಾರ್ದನ್, ಎ.ಆನಂದ್, ಈ. ಶೇಖರ್, ಸುಧಾಕರ್, ಮಂಜುನಾಥ್, ಹೇಮರಾಜ್, ಅನಿಲ್, ಚಂದ್ರಶೇಖರ್, ಒಬಳೇಶ್, ಉಮೇಶ್ ಪ್ರಶಾಂತ್, ಪುಟ್ಟರಾಜು, ಸುಪ್ರಜ್ ಇನ್ನಿತರರು ಧರಣಿಯಲಿ ಪಾಲ್ಗೊಂಡಿದ್ದರು.