ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಸರಕಾರ: ಭಾರತೀಯ ಕ್ರೈಸ್ತ ಒಕ್ಕೂಟ ಸ್ವಾಗತ
ಉಡುಪಿ ಜೂ.16(ಉಡುಪಿ ಟೈಮ್ಸ್ ವರದಿ):ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದುಕೊಂಡಿರುವುದನ್ನು ಭಾರತೀಯ ಕ್ರೈಸ್ತ ಒಕ್ಕೂಟ ಸ್ವಾಗತಿಸಿದೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಭಾರತೀಯ ಕ್ರೈಸ್ತ ಒಕ್ಕೂಟ, ಅಸಂವಿಧಾನಿಕ ಮತಾಂತರ ನಿಷೇಧ ಕಾಯ್ದೆಯನ್ನು ಹಿಂದೆ ತೆಗೆದ ರಾಜ್ಯ ಸರಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದೆ.
ಕಳೆದ ಬಿಜೆಪಿ ಸರಕಾರದಲ್ಲಿ ಒಳ ಅಜೆಂಡವನ್ನು ಹಿಡುಕೊಂಡು ಮಾಡಲಾದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂದೆ ತೆಗೆದಿದ್ದನ್ನು ಭಾರತೀಯ ಕ್ರೈಸ್ತ ಒಕ್ಕೂಟ ಸ್ವಾಗತಿಸುತ್ತದೆ. ಈ ಜನ ವಿರೋಧಿ ಕಾಯ್ದೆ ಬಿಜೆಪಿ ಸರಕಾರ ತರಲು ಹೊರಟಾಗ ಈ ಕಾಯ್ದೆ ವಿರುದ್ಧ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯ ವಿಧಾನಸೌಧದ ಎದುರು ಭಾರತೀಯ ಕ್ರೈಸ್ತ ಒಕ್ಕೂಟ ಈ ಕಾಯ್ದೆ ವಿರುದ್ಧ ಒಂದು ದಿನದ ಉಪವಾಸ ಸತ್ಯಗ್ರಹ ನಡೆಸಿತ್ತು.
ಆ ದಿನ ನಮ್ಮ ಮನವಿಯನ್ನು ಸ್ವೀಕಾರ ಮಾಡಲು ಸರಕಾರದ ಪ್ರತಿನಿಧಿಯಾಗಿ ಅಂದಿನ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಇವರು ಬಂದು ನಿಮ್ಮ ಮನವಿಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು. ಎನೂ ಮಾಡದೆ ಈ ಕಾನೂನನ್ನು ಮಾಡಲೇಬೇಕೆಂದು ಹಠ ಹಿಡಿದು ಈ ಕಾನೂನನ್ನು ಜಾರಿಗೆ ತಂದರು. ಇದೇ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಮ್ಮ ಉಪವಾಸ ಸತ್ಯಾಗ್ರಹ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಅಹವಾಲನ್ನು ಸ್ವೀಕಾರ ಮಾಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಸರಕಾರ ಬಂದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುತ್ತೇವೆ ಎಂದು ಭರವಸೆ ನೀಡಿದರು. ಇದೀಗ ನುಡಿದಂತೆ ನಡೆದು ತಮ್ಮ ಸರಕಾರ, ಅಧಿಕಾರಕ್ಕೆ ಬಂದ ಕೂಡಲೇ ಈ ದ್ವೇಷದ ಕಾನೂನನ್ನು ರದ್ದು ಪಡಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರಿಗೆ ಕ್ರೈಸ್ತ ಬಾಂಧವರ ಪರವಾಗಿ ಮತ್ತು ನಾಡಿನ ಸಮಸ್ತ ಜನತೆಯ ಪರವಾಗಿ ಭಾರತೀಯ ಕ್ರೈಸ್ತ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ.