ಉಡುಪಿ ಎಪಿಎಂಸಿಯಲ್ಲಿ ಭೂಮಿ ಮಾರಾಟ- ಲಂಚ ಪಡೆಯಲಾಗಿದೆ ಆರೋಪ ಸತ್ಯಕ್ಕೆ ದೂರ: ಆಡಳಿತಾಧಿಕಾರಿ
ಉಡುಪಿ ಜೂ.15(ಉಡುಪಿ ಟೈಮ್ಸ್ ವರದಿ): ಎಪಿಎಂಸಿಯಲ್ಲಿ ಮಂಜೂರು ಮಾಡಲಾಗುವ ಲೈಸನ್ಸ್‌ಗಳಿಗೆ ಲಂಚ ಪಡೆಯಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಆದಿಉಡುಪಿಯ ಎಪಿಎಂಸಿಯ ಆಡಳಿತಾಧಿಕಾರಿ ಗೋಪಾಲ ಕಾಕನೂರ ಅವರು ಹೇಳಿದ್ದಾರೆ.
ನಿನ್ನೆ ಎಂಪಿಎಂಸಿಯ ವರ್ಕರು ಪ್ರತಿಭಟನೆ ನಡೆಸಿ ಆಡಳಿತ ವ್ಯವಸ್ಥೆಯ ಬಗ್ಗೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಪ್ರಕಟಣೆ ಮೂಲಕ ಸ್ಪಷ್ಟಣೆ ನೀಡಿದ ಅವರು, ಎಪಿಎಂಸಿಯಲ್ಲಿ ಮಂಜೂರು ಮಾಡಲಾಗುವ ಲೈಸನ್ಸ್‌ಗಳಿಗೆ ನಿಗಧಿಪಡಿಸಿದ ಮೊತ್ತದ ಹಣವನ್ನು ಪಡೆದು ನಿಯಮಾನುಸಾರ ಲೈಸನ್ಸ್ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಯಾವುದೇ ಹಣವನ್ನು ಪಡೆದಿರುವುದಿಲ್ಲ. ಈ ಬಗ್ಗೆ ಲಂಚ ತೆಗೆದುಕೊಂಡಿದ್ದಾರೆ ಎಂದು ಮಾಡಿರುವ ಆರೋಪವು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ರೈತರಿಗೆ ಎಪಿಎಂಸಿಯು ಆಧಾರಸ್ತಂಭವಾಗಿದ್ದು, ಉಡುಪಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಉಡುಪಿ ಎಪಿಎಂಸಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಉಡುಪಿ ಸಮಿತಿಯ ಜಾಗವು ಸರ್ಕಾರಿ ಜಾಗವೆಂದು ದೂರಿದ್ದು, ಈ ಜಾಗವು ಸರ್ಕಾರದ ಜಾಗವಾಗಿರದೇ, ಸಮಿತಿಯು ಖರೀದಿ ಮಾಡಿರುವ ಜಾಗವಾಗಿರುತ್ತದೆ. ಉಡುಪಿ ಮಾರುಕಟ್ಟೆ ಸಮಿತಿಯ ಜಾಗದ ಚಾಲ್ತಿ ಇರುವ ದರವನ್ನು ಸಬ್ ರಿಜಿಸ್ಟ್ರಾರ್‌ರವರಿಂದ ಪಡೆದು, ಅದರಂತೆ, ಇಲಾಖೆಯ ಅಭಿಯಂತರರು ನಿಗಧಿಪಡಿಸಿದ ಬೆಲೆಗೆ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಇವರು ಮಂಜೂರಾತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004 ರ ಪ್ರಕಾರ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಏಫ್.ಪಿ.ಓ, ಸಾಮಾನ್ಯ ಮಹಿಳೆ, ವರ್ತಕರುಗಳಿಗೆ ಮೀಸಲಾತಿಯನ್ನು ನಿಗಧಿಪಡಿಸಿ, ನಿಯಮಾನುಸಾರ ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಿ, ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಇವರು ನಿವೇಶನಗಳನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಲು ಅನುಮೋದನೆ ನೀಡಿರುತ್ತಾರೆ. ಮಾಜಿ ಶಾಸಕರಿಂದ ಸಮಿತಿ ಅಭಿವೃದ್ಧಿಗೆ ರೂ.25 ಲಕ್ಷಗಳ ಅನುದಾನ ಬಂದಿರುವುದಾಗಿ ದೂರಿದ್ದು, ಸಮಿತಿಗೆ ಯಾವುದೇ ಅನುದಾನ ಬಂದಿರುವುದಿಲ್ಲ. ಸಮಿತಿಯ ಪ್ರಾಂಗಣದಲ್ಲಿನ ಎಲ್ಲಾ ಕಾಮಗಾರಿಗಳನ್ನು ಸಮಿತಿಯ ನಿಧಿಯಿಂದಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಮಿತಿಯ ಪ್ರಾಂಗಣದಲ್ಲಿ ಜಾಗವನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ಪಡೆದ ವರ್ತಕರು ಸಮಿತಿಯ ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ವರ್ತಕರು ಲೀಸ್ ಕಂ ಸೇಲ್ ಆಧಾರದಲ್ಲಿ ಪಡೆದ ಜಾಗದ ಮೇಲೆ ಸಮಿತಿಯ ಹಕ್ಕು ಎಂದಿಗೂ ಇದ್ದು, ಸಮಿತಿಯ ನಿಬಂಧನೆಗಳಡಿಯಲ್ಲಿಯೇ ಕೃಷಿ ಹುಟ್ಟುವಳಿಗಳಿಗೆ ಸಂಬಂಧಿಸಿದಂತೆ ವರ್ತಕರು ವ್ಯವಹರಿಸಬೇಕಾಗಿರುತ್ತದೆ. ಮತ್ತು ಗೋದಾಮುಗಳನ್ನು ಇಲಾಖೆಯ ಇಂಜಿನಿಯರ್‌ರವರು ಮಾಡಿದ ನಕಾಶೆಯಂತೆ ನಿರ್ಮಿಸಬೇಕಾಗಿದೆ. ಹಾಗೂ ಸಮಿತಿಗೆ ನಿಯಮಾನುಸಾರ ಮಾರುಕಟ್ಟೆ ಶುಲ್ಕವನ್ನು ಸಹ ಪಾವತಿ ಮಾಡಬೇಕಾಗಿರುತ್ತದೆ ಎಂದಿದ್ದಾರೆ.
ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಸುಸಜ್ಜಿತ ಶೌಚಾಲಯಗಳ ನಿರ್ಮಾಣ, ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯು ಅನುಮೋದನೆಗೊಂಡಿದ್ದು, ಪ್ರಕ್ರಿಯೆಯು ಟೆಂಡರ್ ಕರೆಯುವ ಹಂತದಲ್ಲಿರುತ್ತದೆ. 2020 ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳ ಕಾಯ್ದೆಯ ತಿದ್ದುಪಡಿಯನ್ವಯ ಸಮಿತಿಗೆ ಮಾರುಕಟ್ಟೆ ಪ್ರಾಂಗಣ ಹೊರತುಪಡಿಸಿ ಹೊರಗಿನಿಂದ ಯಾವುದೇ ಆದಾಯ ಇಲ್ಲದಿರುವುದರಿಂದ, ರಾಜ್ಯದ ಎಲ್ಲಾ ಸಮಿತಿಗಳ ಆದಾಯವು ತೀವ್ರ ಕುಂಠಿತಗೊಂಡಿದ್ದು, ಸಮಿತಿಯ ಮೂಲ ಭೂತ ಸೌಕರ್ಯಗಳನ್ನು ಕೈಗೊಳ್ಳಲು ಹಣಕಾಸಿನ ಸಮಸ್ಯೆ ಇದ್ದು, ರಾಜ್ಯದ ಇತರೆ ಸಮಿತಿಗಳಂತೆ ಉಡುಪಿ ಸಮಿತಿಯಲ್ಲಿಯೂ ಸಹ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004 ರನ್ವಯ ನಿವೇಶನಗಳನ್ನು ನಿಯಮಾನುಸಾರ ಪಾರದರ್ಶಕವಾಗಿ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.