ಉಡುಪಿ ಟೈಮ್ಸ್ ವರದಿ ಫಲಶ್ರುತಿ: ಮಳೆ ನೀರು ಹರಿಯುವ ಚರಂಡಿ ಸ್ವಚ್ಛಗೊಳಿಸಿದ ನಗರ ಸಭೆ

ಉಡುಪಿ ಜೂ.15(ಉಡುಪಿ ಟೈಮ್ಸ್ ವರದಿ): “ಉಡುಪಿ ಟೈಮ್ಸ್” ವರದಿಯ ಬಳಿಕ ಎಚ್ಚೆತ್ತ ನಗರ ಸಭೆಯು ನಗರದ ಮಸೀದಿ ರಸ್ತೆಯಲ್ಲಿರುವ ಮಳೆ ನೀರು ಹರಿಯುವ ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಿದೆ.

ನಗರದ ಮಸೀದಿ ರಸ್ತೆಯಲ್ಲಿ ಮಳೆ ನೀರು ಹರಿಯುವ ಚರಂಡಿಯನ್ನು ಸಮರ್ಪಕ ನಿರ್ವಹಣೆ ಮಾಡದ ಕಾರಣ ಮಳೆ ನೀರು ರಸ್ತೆಯಲ್ಲೆಲ್ಲಾ ಹರಿದು ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ನಡೆದಾಡಲು ಸಮಸ್ಯೆ ಆಗುತ್ತಿತ್ತು. ಬಗ್ಗೆ “ಉಡುಪಿ ಟೈಮ್ಸ್” ವರದಿ ಮಾಡಿದ ಬಳಿಕ ಎಚ್ಚೆತ್ತ ನಗರ ಸಭೆಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಚರಂಡಿಗಳನ್ನು ಶುಚಿ ಗೊಳಿಸಿದ್ದು. ಇದೀಗ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಹಕಾರಿಯಾಗಿದೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರ ಸಭೆಯ ಪೌರಾಯುಕ್ತರಾದ ಅವರು, ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 428.78 ಕಿ.ಮೀ. ಚರಂಡಿಗಳು ಮತ್ತು 11.93 ಕಿ.ಮೀ ನಾಲಗಳು ಇದೆ. ಈ ಪೈಕಿ 376.54 ಕಿ.ಮೀ. ಚರಂಡಿಗಳನ್ನು ಹಾಗೂ 11.93 ಕಿ. ಮೀ ನಾಲಗಳನ್ನು ಈಗಾಲೇ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೂ. 5 ರಂದು ವಾರ್ಡ್‌ವಾರು ಚರಂಡಿಗಳನ್ನು ಸ್ವಚ್ಛ ಮಾಡಿದ ಕುರಿತ ಮಾಹಿತಿಯನ್ನು ಪಡೆದುಕೊಂಡಿದ್ದು, ಈ ಚರಂಡಿಗಳ ಪಟ್ಟಿಯಲ್ಲಿ ಇಲ್ಲದೇ ಇರುವ ಅಥವಾ ಕೈ ಬಿಟ್ಟಿರುವ ಚರಂಡಿಗಳ ವಿವರಗಳನ್ನು ನೀಡಲು ಸೂಚಿಸಲಾಗಿದೆ. ಹಾಗೂ ಉಡುಪಿ ನಗರಸಭಾ ವ್ಯಾಪ್ತಿಯ ಚರಂಡಿಗಳ ಪರಿಶೀಲನೆ ನಡೆಸಲು ನಗರಸಭೆಯ ಅಭಿಯಂತರರುಗಳಿಗೆ ಜೂ.3 ರಂದು ಆದೇಶ ನೀಡಲಾಗಿದೆ. ಆದಾಗ್ಯೂ ಪ್ರಥಮವಾಗಿ ಮಳೆ ಬಂದಾಗ ಸಾರ್ವಜನಿಕರು ಚರಂಡಿಗಳಲ್ಲಿ ಎಸೆಯುವ ತ್ಯಾಜ್ಯಗಳಿಂದ ಮತ್ತು ರಸ್ತೆಯ ಫುಟ್‌ಪಾತ್‌ಗಳಿಂದ ನೀರು ಚರಂಡಿಗೆ ಬಿಡುವ ರಂಧ್ರಗಳು ಮುಚ್ಚಿರುವುದರಿಂದ ಕೆಲವೊಮ್ಮೆ ನೀರು ರಸ್ತೆಯ ಮೇಲೆ ನಿಲ್ಲುವುದು ಅಥವಾ ಹರಿಯುವುದು ಸಾಮಾನ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಗರಸಭೆಯ ರಾತ್ರಿ ಪಾಳಯದಲ್ಲಿ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಳಚರಂಡಿ ಮ್ಯಾನ್‌ ಹೋಲ್ ನಿರ್ಮಿಸಿದ ಎರಡೇ ತಿಂಗಳಲ್ಲಿ ಕುಸಿದು ಹೋಗಿರುತ್ತದೆ ಎಂದು ಬರೆದಿದ್ದು, ಇದು ಸತ್ಯಕ್ಕೆ ದೂರವಾಗಿರುತ್ತದೆ. ಅದು ನಗರಸಭೆಯ ಒಳಚರಂಡಿ ಛೇಂಬರ್ ಆಗಿರುವುದಿಲ್ಲ. ಬದಲಾಗಿ ಟಾಟಾ ಕಂಪೆನಿಯ ಇಂಟರ್‌ ನೆಟ್ ಕೇಬಲ್ ಅಳವಡಿಸಿದ ಛೇಂಬರ್ ಆಗಿರುತ್ತದೆ. ಇಲ್ಲಿ ಮಳೆಯಿಂದ ಮಣ್ಣು ಸಿಂಕಾಗಿರುತ್ತದ್ದು ಇದನ್ನು ಕಂಪೆನಿಯವರು ಸರಿಪಡಿಸಬೇಕಾಗಿರುತ್ತದೆ. ಒಂದು ವೇಳೆ ಸರಿಪಡಿಸದೇ ಹೋದಲ್ಲಿ ಈ ಬಗ್ಗೆ ಕಂಪೆನಿಯವರು ನಗರಸಭೆಯಲ್ಲಿ ಇಟ್ಟ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ದುರಸ್ಥಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!