ಸಂತೆಕಟ್ಟೆ ಜಂಕ್ಷನ್ ಬಳಿ ಅಂಡರ್ ಪಾಸ್‌ಗಾಗಿ ಅಗೆದ ಹೊಂಡ ಮುಚ್ಚಿಸಿ – ಶೋಭಾ ಕರಂದ್ಲಾಜೆ
ಉಡುಪಿ, ಜೂ.14 : ಸಂತೆಕಟ್ಟೆ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಂಡರ್ ಪಾಸ್ ಕಾಮಗಾರಿಗಾಗಿ ಅಗೆದಿರುವ ಗುಂಡಿಯನ್ನು ಮುಚ್ಚಿ, ಇಲ್ಲದಿದ್ದರೆ ಅಪಾಯ ಖಂಡಿತ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲದ ಕಾರಣ ಸಂತೆಕಟ್ಟೆ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಗೆದಿರುವ 15ರಂದ 20 ಅಡಿ ಆಳದ ಗುಂಡಿಯನ್ನು ಮುಚ್ಚಿ, ಮಳೆಗಾಲ ಮುಗಿದ ಬಳಿಕ ಮತ್ತೆ ಕೆಲಸ ಮುಂದುವರಿಸಿ ಎಂದು ತಿಳಿಸಿದ್ದಾರೆ.
ಈ ಕಾಮಗಾರಿಯನ್ನು ವೇಗವಾಗಿ ನಡೆಸಿ ಮೇ 30ರೊಳಗೆ ತಡೆಗೋಡೆ ಕಟ್ಟಿಕೊಡುವುದಾಗಿ ಗುತ್ತಿಗೆದಾರರು ನೀಡಿದ ಭರವಸೆಯಂತೆ ಕೆಲಸ ನಡೆದಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ತುಂಬಿದರೆ ಹೆದ್ದಾರಿಯೂ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್‌ವರೆಗೆ ಹೊಂಡಗಳನ್ನು ಮುಚ್ಚುವಂತೆ ಅವರು ಎನ್‌ಎಚ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ಸುರಿಯುವ ಮಳೆಯ ಪ್ರಮಾಣದ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಅರಿವು, ಮಾಹಿತಿ ಇರುವುದಿಲ್ಲ. ಇನ್ನು ಅಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟು ಉದ್ದದ ಹೊಂಡದಲ್ಲಿ ನೀರು ತುಂಬಿದರೆ ಈಗಿರುವ ಹೆದ್ದಾರಿಯೂ ಕುಸಿದು ಬೀಳುವ ಅಪಾಯವಿದೆ. ಹೀಗಾಗಿ ಹೊಂಡಗಳನ್ನು ಮುಚ್ಚಲೇ ಬೇಕಾಗುತ್ತದೆ ಎಂದು ಹೇಳಿದರು.
ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಅಧಿಕಾರಿಗಳು ಗುತ್ತಿಗೆದಾರರು ಸಭೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು. ನಂತರವೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ತಾನು ಸಾರಿಗೆ ಸಚಿವರ ಕಚೇರಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು.
ಹೆಬ್ರಿ ಕಡೆಯಿಂದ ಬರುವ ಘನವಾಹನಗಳು ಸಾಸ್ತಾನ ಟೋಲ್ ತಪ್ಪಿಸುವ ಸಲುವಾಗಿ ಒಳರಸ್ತೆಗಳಲ್ಲಿ ಸಂಚರಿಸು ತ್ತಿದ್ದು, ಇದರಿಂದಲೂ ಅಪಘಾತಗಳು ಹೆಚ್ಚುತ್ತಿದೆ. ಇದಕ್ಕಾಗಿ ರಸ್ತೆಗಳಲ್ಲಿ ಕಮಾನುಗಳನ್ನು ಅಳವಡಿಸುವಂತೆ ಎಸ್ಪಿ ನೀಡಿದ ಸಲಹೆಯಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅದನ್ನು ಅಳವಡಿಸುವಂತೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರು, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಜಿಲ್ಲಾ ಪೊಲೀಸ್ ಇಲಾಖೆ 50ಕ್ಕೂ ಅಧಿಕ ಅಪಘಾತ ವಲಯಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ತಿಳಿಸಿದೆ. ಅದಕ್ಕೆ ಗುತ್ತಿಗೆದಾರರು ಸಮರ್ಪಕ ವಾಗಿ ಸ್ಪಂದಿಸುತ್ತಿಲ್ಲ. ನಾವು ಕರೆದ ಸಭೆಗೂ ಬರುವುದಿಲ್ಲ. ಈ ಬಗೆ ತಿಳಿದಿರುವ ಅಧಿಕಾರಿಗಳನ್ನು ಸಭೆಗೆ ಕಳುಹಿಸುವುದಿಲ್ಲ ಎಂದು ಅವರು ದೂರಿದರು.
ರಾ.ಹೆದ್ದಾರಿಯಲ್ಲಿ ಈ ವರ್ಷದ ಆರಂಭದಿಂದ ಇದುವರೆಗೆ ರಸ್ತೆ ದಾಟುವ ಸಂದರ್ಭದಲ್ಲಿ ಒಟ್ಟು 78 ಅಪಘಾತಗಳು ನಡೆದಿದ್ದು, ಇದರಲ್ಲಿ 12 ಮಂದಿ ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ 5 ಸ್ಥಳಗಳಲ್ಲಿ ಪುಟ್‌ಬ್ರಿಡ್ಜ್‌ಗಳನ್ನು ನಿರ್ಮಿಸಿ ಅದಕ್ಕೆ ಎಸ್ಕಲೇಟರ್ಸ್‌ಗಳನ್ನು ಅಳವಡಿಸುವುದು ಉತ್ತಮ. ಇದನ್ನು ಬೇಕಿದ್ದರೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸಬಹುದು ಎಂದು ಸಲಹೆ ನೀಡಿದರು.
ಇಂದ್ರಾಳಿ ರೈಲ್ವೆ ಬ್ರಿಜ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎನ್‌ಎಚ್ ಅಧಿಕಾರಿ ನಾಗರಾಜ್, ಇದಕ್ಕೆ 485 ಟನ್ ಸ್ಟೀಲ್ ಬೇಕಾಗುತ್ತದೆ. ಸೈಲ್‌ಗೆ ಮೂರು ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಈಗಾಗಲೇ 375 ಟನ್ ಸ್ಟೀಲ್ ಸಿದ್ಧವಿದೆ. ಇದರಲ್ಲಿ 95 ಟನ್ ಸ್ಟೀಲ್‌ನ್ನು ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಅಲ್ಲೇ ಎಲ್ಲವನ್ನೂ ಸಿದ್ಧಪಡಿಸಿ ಇಲ್ಲಿಗೆ ತಂದು ಜೋಡಿಸುವ ಕೆಲಸ ಮಾಡಲಾಗುವುದು. ಮುಂದಿನ ಡಿಸೆಂಬರ್ ವೇಳೆ ಇಂದ್ರಾಳಿ ರೈಲ್ವೆ ಬ್ರಿಜ್ ಖಂಡಿತ ಸಂಚಾರಕ್ಕೆ ಸಿದ್ಧಗೊಳ್ಳಲಿದೆ ಎಂದು ನಾಗರಾಜ್ ವಿವರಿಸಿದರು.
ಸಭೆಯಲ್ಲಿ ಉಡುಪಿ ಜಿಪಂ ಸಿಇಒ ಪ್ರಸನ್ನ ಎಚ್ ಅವರು ಮಾತನಾಡಿ, 103 ಗ್ರಾಮಗಳಲ್ಲಿ ನೀರಿನ ಕೊರತೆ: ಈ ಬೇಸಿಗೆಯಲ್ಲಿ ಜಿಲ್ಲೆಯ 60 ಗ್ರಾಪಂ ವ್ಯಾಪ್ತಿಯ 103 ಗ್ರಾಮಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ. ಇಲ್ಲಿಗೆ ಒಟ್ಟು 50 ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ನೀಡಲಾಗಿದೆ. ಇದಕ್ಕಾಗಿ 77.16 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಈಗಾಗಲೇ ಅನೇಕ ಗ್ರಾಪಂಗಳು ಹಣದ ಕೊರತೆಯಿಂದ ಟ್ಯಾಂಕರ್ ನೀರು ಪೂರೈಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಸರಕಾರ ಬರ ಎಂದು ಘೋಷಣೆ ಮಾಡದೇ ಇರುವುದರಿಂದ ಪ್ರಕೃತಿ ವಿಕೋಪ ನಿಧಿಯಲ್ಲಿ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ, ಗ್ರಾಪಂಗಳು ನೀರಿನ ಪೂರೈಕೆಗೆ ಸ್ವಂತ ಅನುದಾನಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿ, ನಂತರ ಸರ್ಕಾರಕ್ಕೆ ಪತ್ರ ಬರೆದು ನೀರು ಪೂರೈಕೆಗೆ ವೆಚ್ಚದ ಮಾಡಿದ ಹಣವನ್ನು ಮರುಪಾವತಿ ಮಾಡುವ ವ್ಯವಸ್ಥೆ ಮಾಡಿ ಎಂದರು.
ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಯತೀಶ್, ಎಡಿಸಿ ವೀಣಾ ಮುಂತಾದವರು ಉಪಸ್ಥಿತರಿದ್ದರು.
Why there is no planning? How much loss estimated? Is rework amount paid by contractors?
who will pay for this additional job. The debris removed from site. From where to bring soil for filling. It took so many months to dig and may take many more months to fill. Why contractors not called for meeting to get their opinion.