ಉಡುಪಿ: 4.69ಕೋಟಿ ಮೌಲ್ಯದ ಸೈಟ್‌‌ಗಳು 88ಲಕ್ಷ ರೂ.ಗೆ ಸೇಲ್- ಎಪಿಎಂಸಿ ವ್ಯಾಪರಸ್ಥರಿಂದ ಪ್ರತಿಭಟನೆ

ಉಡುಪಿ, ಜೂ.14: ಇಲ್ಲಿನ ಎಪಿಎಂಸಿಯ ಅವ್ಯವಹಾರದ ವಿರುದ್ಧ ವ್ಯಾಪಾರಸ್ಥರು ಇಂದು ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯಲ್ಲಿ ವ್ಯಾಪರಸ್ಥರು, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಯು ಆದಿಉಡುಪಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ 4.69ಕೋಟಿ ಮೌಲ್ಯದ  11 ಸೈಟ್‌ನ್ನು ಕೇವಲ 88ಲಕ್ಷ ರೂ.ಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಹಾಗೂ ಈ ವಿಚಾರದಲ್ಲಿ ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಈ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸ್ದಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 10-15ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಅಧಿಕಾರಿಗಳ ಅನುಮತಿ ಪಡೆದು ವರ್ಷದ ಹಿಂದೆ 2-3ಲಕ್ಷ ರೂ. ಖರ್ಚು ಮಾಡಿ ಗೋದಾಮು ನಿರ್ಮಿಸಿಕೊಂಡಿದ್ದೇವೆ. ಆದರೆ ಈಗ ನಮ್ಮ ಗೋದಾಮು ತೆರವುಗೊಳಿಸುವಂತೆ ಹೇಳುತ್ತಿದ್ದಾರೆ. ನಾವು ವ್ಯಾಪಾರ ಮಾಡುವ ಜಾಗವನ್ನು ಅಧಿಕಾರಿಗಳು ಬೇರೆಯವರಿಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ನಾವು ಗೋದಾಮು ನಿರ್ಮಿಸುವಾಗ ಅಧಿಕಾರಿಗಳು ನಮ್ಮಿಂದ ಸಾವಿರಾರು ರೂ. ಲಂಚದ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ ವರ್ತಕರು, ಈಗ ನಮ್ಮಿಂದ ಈ ಜಾಗವನ್ನು ಕಿತ್ತುಕೊಳ್ಳುವುದರಿಂದ 25-30 ವ್ಯಾಪಾರಸ್ಥರು ಬೀದಿಗೆ ಬರಲಿದ್ದಾರೆ. ಆದುದರಿಂದ ಇದನ್ನು ಕೂಡಲೇ ರದ್ದು ಪಡಿಸಬೇಕು ಎಂದು ವ್ಯಾಪಾರಸ್ಥ ಲಕ್ಷ್ಮಣ್ ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಈ ಕುರಿತು ಎಂಪಿಎಂಸಿ ಆಡಳಿತಾಧಿಕಾರಿ ಗೋಪಾಲ ಕಾಕನೂರು ಅವರಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ವ್ಯಾಪಾರಸ್ಥರಾದ ಫಯಾಝ್, ಬಸಯ್ಯ, ಪ್ರಭು ಗೌಡ, ಚಂದ್ರ, ರಾಘಣ್ಣ, ಸೈಯ್ಯದತ್, ರಮೇಶ್ ಪೈ, ವಿವಿಧ ಸಂಘಟನೆಗಳ ಮುಖಂಡರಾದ ಸುಭಾಷಿತ್ ಕುಮಾರ್, ವೇದಾವತಿ ಹೆಗ್ಡೆ, ಚಿನ್ಮಯ ಮೂರ್ತಿ, ಧೀರಜ್, ಸುರೇಶ್ ಆರ್.ಪಿ., ರೈತ ಮುಖಂಡ ರಾಘವೇಂದ್ರ ಉಪ್ಪೂರು, ರಾಧಾಕೃಷ್ಣ ಶೆಟ್ಟಿ, ರಾಧಾಕೃಷ್ಣ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಡುಪಿ ಎಪಿಎಂಸಿಯ ಪ್ರಭಾರ ಆಡಳಿತ ಅಧಿಕಾರಿ ಗೋಪಾಲ ಕಾಕನೂರ ಅವರು, “ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅರೆ ಸರಕಾರಿ ಸಂಸ್ಥೆ ಯಾಗಿದ್ದು, ಇದರ ಖಾಸಗಿ ಜಾಗವನ್ನು ಇಲಾಖೆಯಿಂದ ಅಧಿಕೃತ ಲೈಸೆನ್ಸ್ ಪಡೆದ ಅರ್ಹ ಪೇಟೆ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗುತ್ತಿದೆ. ಇಲ್ಲಿನ 14 ಸಾಮಾನ್ಯ ನಿವೇಶನಗಳಿಗೆ ಇಲಾಖೆ ನಿಗದಿಪಡಿಸಿದ ದರ ಪ್ರತಿ ಚದರಡಿಗೆ 376ರೂ.ನಂತೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈವರೆಗೆ 11ಮಂದಿ ಅರ್ಜಿ ಹಾಕಿದ್ದಾರೆ. ಈಗ ಕೆಲವು ವ್ಯಾಪಾರಸ್ಥರು ಮಾಡುತ್ತಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!