ಉಡುಪಿ: ಜಿಲ್ಲೆಯ ವಿವಿಧೆಡೆ ಮಟ್ಕಾ ಜುಗಾರಿ – 7 ಮಂದಿ, 4680 ರೂ. ವಶ
ಉಡುಪಿ ಜೂ.14(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಂಕರನಾರಾಯಣ ಪೊಲೀಸರು ಠಾಣಾ ವ್ಯಾಪ್ತಿಯ ಕುಂದಾಪುರ ಹಾಲಾಡಿ ಗ್ರಾಮದ ಮಾರ್ಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಿಜಯ ಕುಮಾರ್ (43) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 940 ರೂ. ನಗದು, ಬ್ರಹ್ಮಾವರದ ವಂಡಾರು ಗ್ರಾಮದ ಮಾವಿನಕಟ್ಟೆ ಬಸ್ಸುನಿಲ್ದಾಣದ ಬಳಿ ಕಾರ್ತಿಕ (24) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 640 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಕುಂದಾಪುರದ ಕಸಬಾ ಗ್ರಾಮದ ಮೀನು ಮಾರ್ಕೆಟ್ ಬಳಿ ಸುಕೇಶ್ ಆಚಾರಿ (32) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 470 ರೂ. ನಗದು ಮತ್ತು ಕೊಲ್ಲೂರು ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಕೊಲ್ಲೂರು ಗ್ರಾಮದ ಶ್ರೀ ಮೂಕಾಂಬಿಕಾ ಸಮೀಪ ದಾಳಿ ನಡೆಸಿ ರಾಜೇಶ್ ಕುಮಾರ್ (34) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 710 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಬೈಂದೂರು ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ವೈನ್ ಶಾಪ್ ಬಳಿ ನಾರಾಯಣ(39) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 640 ರೂ. ನಗದು, ಯಡ್ತರೆ ಗ್ರಾಮದ ಮೀನು ಮಾರ್ಕೇಟ್ ಬಳಿ ಭಾಸ್ಕರ ಶೆಟ್ಟಿ (54) ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 710 ರೂ. ನಗದು ಮತ್ತು ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಬೈಪಾಸ್ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಶ್ರೀನಿವಾಸ ದೇವಾಡಿಗ ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 570 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿ ಶಂಕರನಾರಾಯಣ ಠಾಣೆಯಲ್ಲಿ 2, ಕುಂದಾಪುರ ಹಾಗೂ ಕೊಲ್ಲೂರು ಠಾಣೆಯಲ್ಲಿ ತಲಾ ಒಂದು ಮತ್ತು ಬೈಂದೂರು ಠಾಣೆಯಲ್ಲಿ ಮೂರು ಸೇರಿ ಒಟ್ಟು ಜಿಲ್ಲೆಯ ವಿವಿಧ ಠಾಣೆಯಲ್ಲಿ 7 ಪ್ರಕರಣ ದಾಖಲಾಗಿದೆ.