ನನ್ನ ವಿದ್ಯಾರ್ಹತೆ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಇದೆ: ಪ್ರಿಯಾಂಕ್ ಖರ್ಗೆ
ಕಲಬುರಗಿ ಜೂ.11 : ನನ್ನ ವಿದ್ಯಾರ್ಹತೆ ನನ್ನ ಚುನಾವಣಾ ಅಫಿಡವಿಟ್‍ನಲ್ಲಿದೆ. ನನ್ನ ಬಗ್ಗೆ ಕಾಳಜಿ ಇರುವವರು ಅವರ ಸುಪ್ರೀಂ ಲೀಡರ್ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳಲಿ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ವಿದ್ಯಾರ್ಹತೆ ನನ್ನ ಚುನಾವಣಾ ಅಫಿಡವಿಟ್‍ನಲ್ಲಿದೆ. ನಾನು ಮಾಡಿರುವ ವಿದ್ಯಾಭ್ಯಾಸ ಅವರಿಗೆ ತಿಳಿಯದೇ ಇರಬಹುದು. ನನ್ನ ಬಗ್ಗೆ ಕಾಳಜಿ ಇರುವವರು ಅವರ ಸುಪ್ರೀಂ ಲೀಡರ್ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳಲಿ. ಯಾರಾದರೂ ಪ್ರಧಾನಿ ಪದವಿ ಬಗ್ಗೆ ಆರ್‍ಟಿಐನಲ್ಲಿ ಕೇಳಿದರೆ ಕೊಡಬೇಡಿ ಎಂದು ಹೇಳಿದ್ದಾರೆ. ನಾನು ಚುನಾಯಿತ ಪ್ರತಿನಿಧಿ, ಜನ ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ಹಾರಾಡುವವರ ವಿರುದ್ದ ಮತ್ತು ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್ ಸರಕಾರ ಶೇ.45 ಪರ್ಸೆಂಟ್ ಸರಕಾರ ಎನ್ನುವ ಎಚ್.ಡಿ.ಕುಮಾರಸ್ವಾಮಿ ತಮ್ಮ ಆರೋಪಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು. ಹಾಗೂ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ ಕಾರಣ ಚುನಾವಣೆ ಸಮಯದಲ್ಲಿ ನಡೆದ ತರಾತುರಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಜೆಡಿಎಸ್‍ಗೆ ಪಾರದರ್ಶಕತೆ ಬೇಡವಾ? ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವುದು ಬೇಡವಾ? ಈ ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಕೋರಿದರು.
‘ರಾಜ್ಯದ ಜನರಿಗಿಂತ ವಿರೋಧ ಪಕ್ಷದವರಿಗೆ ನಮ್ಮ ‘ಗ್ಯಾರಂಟಿ ಯೋಜನೆ’ ಮೊದಲು ಬೇಕಾಗಿದೆ. ನಾಲ್ಕು ವರ್ಷ ಬಿಜೆಪಿಯವರು ಏನು ಮಾಡಲಿಲ್ಲಾ. ಇದೀಗ ನಮ್ಮ ಯೋಜನೆಗೆ ಆರ್ಥಿಕ ಹೊರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಆರ್ಥಿಕ ಹೊರವಷ್ಟು ಸಾಮಥ್ರ್ಯ ನಮ್ಮ ಮುಖ್ಯಮಂತ್ರಿಗೆ ಇದೆ. ಬಡವರು, ಮಹಿಳೆಯರು, ರೈತರಿಗೆ ಅನುಕೂಲ ಮಾಡಲು ಹೊರಟಾಗ ಹಣ ಎಲ್ಲಿಂದ ತರುತ್ತೀರಿ? ಎಂದು ಪ್ರಶ್ನೆ ಮಾಡುತ್ತಿದ್ದಾರೆಂದು ಟೀಕಿಸಿದರು. ಹಾಗೂ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ದಿನ ಐತಿಹಾಸಿಕ ದಿನ. ಬಸ್ ಪ್ರಯಾಣ ದರ ಹೆಚ್ಚಾಗಿದ್ದರಿಂದ ಎಲ್ಲ ಕಾರ್ಯಕ್ರಮಕ್ಕೆ ಪುರುಷರೇ ಹೋಗುತ್ತಿದ್ದರು. ನಾಮಕರಣ ಹಾಗೂ ಇತರ ಕಾರ್ಯಕ್ರಮಕ್ಕೆ ಪುರುಷರೇ ಹೋಗುತ್ತಿದ್ದರು. ಇದೀಗ ನಮ್ಮ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.