ಮಣಿಪಾಲ: ಸರಕಾರಿ ಉದ್ಯೋಗ ನೀಡುವುದಾಗಿ ಹಣ ಪಡೆದು ವಂಚನೆ
ಮಣಿಪಾಲ ಜೂ.9(ಉಡುಪಿ ಟೈಮ್ಸ್ ವರದಿ): ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿಂಜಿಬೆಟ್ಟುವಿನ ಮನೋಳಿಗುಜ್ಜಿ ನಿವಾಸಿ ಬಿ ನವೀನ್ ರಾವ್ ಎಂಬವರಿಗೆ 2023 ರ ಜನವರಿಯಲ್ಲಿ ಸ್ನೇಹಿತನಿಂದ ಮೊಬೈಲ್ ಮುಖಾಂತರ ಆರೋಪಿತ ಭಾಸ್ಕರ ಭಟ್ ನ ಪರಿಚಯವಾಗಿತ್ತು. ಆತನು ತಾನು ವಿಧಾನಸೌಧದಲ್ಲಿ ಸರಕಾರಿ ಹುದ್ದೆಯ ಕಾರ್ಯದರ್ಶಿ ಯಾಗಿ ಕೆಲಸ ಮಾಡಿಕೊಂಡಿದ್ದಾಗಿ ನಂಬಿಸಿ, ನವೀನ್ ರಾವ್ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಬೇಕಾದಲ್ಲಿ ನೇರ ನೇಮಕಾತಿಯ ಮೂಲಕ ಮಾಡಿಸಿಕೊಡುವುದಾಗಿಯೂ ವಾಟ್ಸಪ್ ಮೂಲಕ ದಾಖಲೆಗಳನ್ನು ಕಳುಹಿಸುವಂತೆ ಮತ್ತು ತನ್ನ ಮಗನಾದ ಅನಿರುದ್ಧ ಬ್ಯಾಂಕ್ ಖಾತೆಯ ವಿವರ ವನ್ನು ಕಳುಹಿಸುವುದಾಗಿಯೂ ಅದಕ್ಕೆ ಹಣ ಕಳುಹಿಸುವಂತೆ ತಿಳಿಸಿದ್ದನು. ಇದನ್ನು ನಂಬಿದ ನವೀನ್ ರಾವ್ ಅವರು ಆರೋಪಿತನ ಮೊಬೈಲ್ ಗೆ ದಾಖಲೆಗಳನ್ನು ಕಳುಹಿಸಿ 2023 ರ ಜ.19 ರಿಂದ ಫೆ.2 ರ ವರೆಗೆ ಆರೋಪಿತನ ಮಗನ ಖಾತೆಗೆ ಒಟ್ಟು 40 ಸಾವಿರ ರೂ. ಹಣವನ್ನು ವರ್ಗಾಯಿಸಿದ್ದಾರೆ. ಆರೋಪಿತನು ಫೆಬ್ರವರಿ 20 ರ ಒಳಗೆ ಉದ್ಯೋಗದ ಆದೇಶ ಬರುವುದಾಗಿ ಹೇಳಿದ್ದು, ನೇಮಕಾತಿ ಆದೇಶವು ಬಾರದೇ ಇದ್ದುದನ್ನು ಕಂಡು ಆರೋಪಿತ ಭಾಸ್ಕರ ಭಟ್ ಬಳಿ ಉದ್ಯೋಗದ ಬಗ್ಗೆ ನೀಡಿದ ಹಣವನ್ನು ವಾಪಾಸು ಕೊಡಲು ಹೇಳಿದಾಗ ಆತನು ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾಗಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.