ಉಡುಪಿ: ಮೆಸ್ಕಾಂ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಗೆ 1.79 ಲ.ರೂ ವಂಚನೆ
ಉಡುಪಿ ಜೂ.9(ಉಡುಪಿ ಟೈಮ್ಸ್ ವರದಿ):ಕೂಡಲೇ ಬಾಕಿ ಕರೆಂಟ್ ಬಿಲ್ ಕಟ್ಟಬೇಕು ಎಂದು ಹೇಳಿ ಓಟಿಪಿ ಪಡೆದು ಅಪರಿಚಿತ ವ್ಯಕ್ತಿಯೋರ್ವ ಅಂಬಲ ಪಾಡಿ ನಿವಾಸಿಯೊಬ್ಬರಿಗೆ 1.79 ಲ.ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಅಂಬಲಪಾಡಿ ನಿವಾಸಿ ಎಂ. ಗುರುರಾಜ್ ಭಟ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಜೂ.8 ರಂದು ಎಂ. ಗುರುರಾಜ್ ಭಟ್ ಇವರಿಗೆ ವಿವಿಧ ನಂಬರಿನಿಂದ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ತಾನು ಮೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡಿದ್ದು. ಅಲ್ಲದೆ ಎಂ. ಗುರುರಾಜ್ ಭಟ್ ಅವರ ಮನೆಯ ಹಿಂದಿನ ಬಾಕಿ ಇರುವ ಕರೆಂಟ್ ಬಿಲ್ಲನ್ನು ಈ ಕೂಡಲೇ ಕಟ್ಟಬೇಕು ಎಂದು ಹೇಳಿ ನಂಬಿಸಿದ್ದರು. ಜೊತೆಗೆ ಎಂ. ಗುರುರಾಜ್ ಭಟ್ ಅವರಿಂದ OTP ಯನ್ನು ಪಡೆದು ಅವರ 2 ಬ್ಯಾಂಕ್ ಖಾತೆಗಳಿಂದ ಒಟ್ಟು 1,79,130 ರೂ. ಹಣವನ್ನು ಆನ್‌ಲೈನ್ ಮುಖೇನ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.