ಶಿರ್ವಾ: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರ ಮೃತ್ಯು
ಶಿರ್ವಾ ಜೂ.9(ಉಡುಪಿ ಟೈಮ್ಸ್ ವರದಿ): ಗ್ರಾಮದ ಸಾಲ್ಮರ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಶಂಕರ ಆಚಾರ್ಯ (51) ಮೃತಪಟ್ಟವರು. ಜೂ.8 ರಂದು ರಾತ್ರಿ ಶಿರ್ವ ಗ್ರಾಮದ ಸಾಲ್ಮರ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಶಂಕರ ಆಚಾರ್ಯ ಅವರು ಬಂಟಕಲ್ ಕಡೆಯಿಂದ ಶಂಕರಪುರ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ ಬರುತ್ತಿದ್ದ ದ್ಚಿಚಕ್ರ ವಾಹನವು ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ವಾಹನ ಸಮೇತ ರಸ್ತೆಗೆ ಬಿದ್ದಿದ್ದರು. ಅಪಘಾತದಲ್ಲಿ ಗಾಯಗೊಂಡ ಶಂಕರ ಆಚಾರ್ಯ ಹಾಗೂ ಕರುಣಾಕರ ಮೂಲ್ಯ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಗಂಭೀರ ಗಾಯಗೊಂಡ ಶಂಕರ ಆಚಾರ್ಯ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.