ಬೃಹತ್ ರಕ್ತದಾನ ಶಿಬಿರದ ಮೂಲಕ ಉದ್ಯಮಿ ಉದಯ್ ಶೆಟ್ಟಿ ಹುಟ್ಟು ಹಬ್ಬ ಆಚರಣೆ

ಕಾರ್ಕಳ ಜೂ.8 : ಉದಯ ಶೆಟ್ಟಿ ಮುನಿಯಾಲು ಅವರ 50ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗದ ವತಿಯಿಂದ ಕಾರ್ಕಳದ ಪುರಿ ಲಕ್ಷ್ಮೀ ದೇವಿ ಕಲ್ಯಾಣ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು,  ಉದಯ ಶೆಟ್ಟಿ ಅವರು ತಮ್ಮ50 ನೇ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರ ಮತ್ತು ಸರಕಾರಿ ಶಾಲಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುವ ಮೂಲಕ ಆಚರಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.

ಮಾನವನ ವ್ಯಕ್ತಿತ್ವಕ್ಕೆ ನಯ, ವಿನಯತೆ ಭೂಷಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವ ಭಾವನೆ ಹೊಂದಿರುವುದು ಮುಖ್ಯ ಆ ಮನಸ್ಸು ಉದಯ ಶೆಟ್ಟಿ ಅವರಲ್ಲಿದೆ. ಸರಕಾರದ ಅನುದಾನ ಕೊಡುವಾಗ ಕೆಲವರು ತನ್ನ ಪತ್ನಿಯ ಕರಿಮಣಿ ಮಾರಾಟ ಮಾಡಿ ಕೊಟ್ಟಂತೆ ವರ್ತಿಸುತ್ತಾರೆ. ಇದು ಆಗಬಾರದು ಎಂದು ಹೇಳಿದರು. 

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಅವರು ಮಾತನಾಡಿ, ಉದಯ ಶೆಟ್ಟಿ ಅವರ ವ್ಯಕ್ತಿತ್ವವೇ ಅವರನ್ನು ಜನನಾಯಕನನ್ನಾಗಿ ಮಾಡಿದೆ. ಮುಂದಿನ ದಿನಗಳಲ್ಲಿ ಉದಯ ಶೆಟ್ಟಿ ಅವರು ಕಾರ್ಕಳದ ಜನತೆಯ ಧ್ವನಿಯಾಗಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಬೆಳಪು ಅವರು ಮಾತನಾಡಿ, ಉದಯ ಶೆಟ್ಟಿ ಅವರಿಗೆ 55 ವರ್ಷ ತುಂಬುವಾಗ ಕಾರ್ಕಳದ ಶಾಸಕರಾಗಿ ಆಯ್ಕೆಯಾಗಬೇಕು. ಉದಯ ಶೆಟ್ಟಿ ಅವರು ಜನಸೇವಕರಾಗಿ, ಜನನಾಯಕರಾಗಿ ಜನರ ಧ್ವನಿಯಾಗಿರಬೇಕೆಂದು ಆಶಿಸಿದರು.

ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ಅವರು ಮಾತನಾಡಿ, ಚುನಾವಣೆ ಸಂದರ್ಭ ನನ್ನಲ್ಲಿ ಅನೇಕರು ಪ್ರಶ್ನಿಸಿದರು. ನಿಮ್ಮ ಅಣ್ಣ ಆಕಡೆ ಇದ್ದಾರೆ. ನೀವು ಈಕಡೆ ಎಂದು. ನಾನು ಯಾವ ಕಡೆಯೂ ಅಲ್ಲ. ನಾನು ಎಂದಿಂದೆಗೂ ಉದಯಣ್ಣನ ಕಡೆ ಎಂದು ಹೇಳಿದ್ದೆ. ಅಂತಹ ಬಾಂಧವ್ಯ ನಮ್ಮಲ್ಲಿದೆ. ಅವರು ನೂರು ವರ್ಷ ಆರೋಗ್ಯವಂತರಾಗಿರಬೇಕು. ಅವರಿಗೆ ಜನ ಸೇವೆ ಮಾಡುವ ಅನುಗ್ರಹ ದೇವರು ನೀಡಬೇಕೆಂದು ಹರಿಸಿದರು.

ಈ ವೇಳೆ ಮಾತನಾಡಿದ ಉದಯ ಶೆಟ್ಟಿ ಅವರು, ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆಯಾದಲ್ಲಿ ನನ್ನಲ್ಲಿ ನೇರವಾಗಿ ಹೇಳಿ. ಅದೆಲ್ಲವನ್ನೂ ಎದುರಿಸುವ ಶಕ್ತಿ ನನ್ನಲ್ಲಿದೆ. ಕೆಲವರು ಅವನನ್ನು ನೋಡಿಕೊಳ್ಳುತ್ತೇನೆ. ಇವನನ್ನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಅಂತಹ 10 ಮಂದಿಯನ್ನು ನೋಡಿಕೊಳ್ಳುವ ಶಕ್ತಿ ನಮಗಿದೆ. ಈ ಬಾರಿ ನಾವು ನಂಬರ್‌ನಲ್ಲಿ ಸೋತಿರಬಹುದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಉಡುಪಿಯಲ್ಲಿ ಒಂದೇ ಒಂದು ಕಾಂಗ್ರೆಸ್ ಶಾಸಕ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸೆಲ್ಸಿಯಲ್ಲಿ 600ಕ್ಕಿಂತ ಅಧಿಕ ಅಂಕ ಪಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ, ಪಿಯುಸಿಯಲ್ಲಿ 575ಕ್ಕಿಂತ ಹೆಚ್ಚು ಅಂಕ ಪಡೆದ ಸರಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಕಾಂಗ್ರೆಸ್ ಮುಖಂಡರಾದ ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಅಮಿತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!