ಶಿವಮೊಗ್ಗದಲ್ಲಿ ನಾಳೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ
ಶಿವಮೊಗ್ಗ ಜೂ.7: ಜಿಲ್ಲೆಯ ರೋಟರಿ ಬ್ಲಡ್ ಬ್ಯಾಂಕ್ ರಸ್ತೆಯ ವಿನಾಯಕ ನಗರದ ನೂತನ ಕಟ್ಟಡದಲ್ಲಿ ನಾಳೆ( ಜೂ.8) ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಉದ್ಘಾಟನೆ ಗೊಳ್ಳಲಿದೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಕೂಡ್ಲು ಅವರು ಮಾಹಿತಿ ನೀಡಿದ್ದು, ಮಲ್ನಾಡ್ ಕಣ್ಣಿನ ಆಸ್ಪತ್ರೆ-ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಅಂಗ ಸಂಸ್ಥೆಯಾಗಿ ಶಿವಮೊಗ್ಗದ ರೋಟರಿ ಬ್ಲಡ್ ಬ್ಯಾಂಕ್ ರಸ್ತೆಯ ವಿನಾಯಕ ನಗರದ ನೂತನ ಕಟ್ಟಡದಲ್ಲಿ ಆರಂಭ ಗೊಳ್ಳಲಿರುವ ಮಲ್ನಾಡ್ ಕಣ್ಣಿನ ಆಸ್ಪತ್ರೆ- ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ನಾಳೆ ಬೆಳಿಗ್ಗೆ 11.30ಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಹಾಗೂ ಜೋತಿಷ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಅವರು ದ್ವೀಪ ಬೆಳಗಿಸಿ ಶುಭ ಹಾರೈಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದ ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹೊರ ರೋಗಿ ವಿಭಾಗವನ್ನು ವಿಧಾನ ಪರಿಷತ್ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ, ಕ್ಲಿನಿಕ್ ಹಾಗೂ ಲೇಸರ್ ವಿಭಾಗವನ್ನು ಶಿವಮೊಗ್ಗ ಗ್ರಾಜುವೇಟ್ ಕೋ-ಆಪ್. ಸೊಸೈಟಿ ಅಧ್ಯಕ್ಷ ಎಸ್.ಪಿ. ದಿನೇಶ್, ಕನ್ನಡಕ ವಿಭಾಗವನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಜ್ಯೋತಿ ಪ್ರಕಾಶ್, ಶಸ್ತ್ರಚಿಕಿತ್ಸಾ ಕೊಠಡಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್, ಪ್ರಸಾದ್ ನೇತ್ರಾಲಯದ ನಿರ್ದೇಶಕ ಕೆ. ರಘುರಾಮ್ ರಾವ್, ನಿವೃತ್ತ ಪ್ರಾಂಶುಪಾಲ ಪಿ. ಜಯಪ್ಪ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ ಪ್ರಸಾದ್ ನೇತ್ರಾಲಯ ಕಳೆದ 2 ದಶಕಗಳಿಗೂ ಮೇಲ್ಪಟ್ಟು ಕಣ್ಣಿನ ಎಲ್ಲ ವಿಭಾಗಗಳಲ್ಲಿ ನುರಿತ ತಜ್ಞರ ಸೇವೆ, ಅತ್ಯಾಧುನಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಗುಣಮಟ್ಟದಚಿಕಿತ್ಪೋಪ ಕರಣಗಳ ಮೂಲಕ ತರಬೇತಿ ಹೊಂದಿದ ಸಿಬ್ಬಂದಿ ಸೇವೆಯೊಂದಿಗೆ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದೆ. ಪ್ರಸಾದ್ ನೇತ್ರಾಲಯವು ನೇತ್ರತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಕೃಷ್ಣಪ್ರಸಾದ್ ಕೂಡ್ಲು ಅವರ ನೇತೃತ್ವದಲ್ಲಿ ಉಡುಪಿಯಲ್ಲಿ ನೇತ್ರ ಸೇವೆ ಆರಂಭಿಸಿ ಪ್ರಸ್ತುತ ಮಂಗಳೂರು ಮತ್ತು 3ನೇ ಸ್ತರದ ಪಟ್ಟಣಗಳಾದ ಸುಳ್ಯ, ತೀರ್ಥಹಳ್ಳಿಯಲ್ಲಿ ಕಣ್ಣಿನ ಆಸ್ಪತ್ರೆಗಳ ಮೂಲಕ ಸೇವೆ ನೀಡುತ್ತಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.