ಇನ್ನಂಜೆ: ಮುಂಬೈ- ಬೆಂಗಳೂರು ರೈಲು ನಿಲುಗಡೆಗೆ ಆಗ್ರಹ
ಇನ್ನಂಜೆ ಜೂ.4(ಉಡುಪಿ ಟೈಮ್ಸ್ ವರದಿ): ಇನ್ನಂಜೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆರಿದ್ದರೂ ಕೇವಲ ಒಂದು ಲೋಕಲ್ ರೈಲು ನಿಲುಗಡೆ ಆಗುತ್ತಿರುವ ಕಾರಣ ಮುಂಬೈ- ಬೆಂಗಳೂರು ರೈಲು ನಿಲುಗಡೆ ಮಾಡುವಂತೆ ಇನ್ನಂಜೆ ರೈಲ್ವೆ ನಿಲ್ದಾಣ ಅವಲಂಬಿತ ಆಸುಪಾಸಿನ ಗ್ರಾಮಸ್ಥರು ಲೋಕಸಭಾ ಸದಸ್ಯೆ ಹಾಗೂ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಭಾಗದ ಜನರ ಬಹುಕಾಲದ ಬೇಡಿಕೆಯಾದ ಮುಂಬೈ ಹಾಗೂ ಬೆಂಗಳೂರು ರೈಲು ನಿಲುಗಡೆ ಆಗುವಂತೆ ಸಲ್ಲಿಸಿರುವ ಮನವಿಯಲ್ಲಿ, “ಈ ಹಿಂದೆ ಕೊಂಕಣ ರೈಲು ಪ್ರಾರಂಭದ ಹಂತದಲ್ಲಿ ನಿರ್ಮಾಣವಾದ ಇನ್ನಂಜೆ ರೈಲು ನಿಲ್ದಾಣ ಕಣ್ಮರೆಯಾಗಿ ಕೆಲವು ವರುಷಗಳ ಹೋರಾಟದ ಭಲಶ್ರುತಿಯಾಗಿ ಪುನರಪಿ ರೈಲು ನಿಲ್ದಾಣ ಅಭಿವೃದ್ಧಿ ಹೊಂದಿ ಮೇಲ್ದರ್ಜೆಗೇರಿದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ನಂತರದ ದಿನಗಳಲ್ಲಿ ಎರಡು ಲೋಕಲ್ ರೈಲುಗಳು ನಿಲುಗಡೆ ಇದ್ದರೂ ಸದ್ಯ ಒಂದು ಲೋಕಲ್ ರೈಲು ನಿಲುಗಡೆ ಮಾತ್ರ ಆಗುತ್ತಿದ್ದು ಈ ಭಾಗದ ಜನರಿಗೆ ನಿರಾಶೆಯಾಗಿದೆ. ಈ ಭಾಗದ ಅತೀ ಹೆಚ್ಚು ಜನರು ಉದ್ಯೋಗ, ವ್ಯವಹಾರಕ್ಕಾಗಿ ದೂರದ ಮುಂಬೈ ಹಾಗೂ ಬೆಂಗಳೂರು ಆಶ್ರಯಿಸಿಕೊಂಡಿರುವುದರಿಂದ ಇಲ್ಲಿ ಆದಷ್ಟು ಬೇಗ ಮುಂಬೈ ಹಾಗೂ ಬೆಂಗಳೂರು ರೈಲುಗಳು ನಿಲುಗಡೆ ಆಗಬೇಕು” ಎಂದು ಇನ್ನಂಜೆ ರೈಲು ನಿಲ್ದಾಣದ ಅವಲಂಬಿತ ಇನ್ನಂಜೆ ಹಾಗೂ ಪಾಂಗಾಳ ಜಂಟಿ ಗ್ರಾಮ ಅಲ್ಲದೆ ಆಸುಪಾಸಿನ ಶಂಕರಪುರ, ಕುರ್ಕಾಲು, ಮಣಿಪುರ, ಮೂಡುಬೆಳ್ಳೆ, ಪಡುಬೆಳ್ಳೆ, ಕಟಪಾಡಿ, ಮಟ್ಟು, ಮಜೂರು, ಪಾದೂರು, ಹೇರೂರು, ಬಂಟಕಲ್, ಪಾಂಬೂರು, ಶಿರ್ವ, ಬೆಳ್ಳಣ್ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.