ಪುತ್ತಿಗೆ ಶ್ರೀಪಾದರಿಗೆ ದ್ವಾರಕೆಯಲ್ಲಿ ಪೌರಾಭಿನಂದನೆ
ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಪರ್ಯಾಯ ಪೂರ್ವಭಾವಿ ಭಾರತ ಪರಿಕ್ರಮ ಯಾತ್ರೆಯಲ್ಲಿ ಮೋಕ್ಷಪ್ರದ ದ್ವಾರಕಾ ಕ್ಷೇತ್ರ ಯಾತ್ರೆ ನಡೆಸಿ ಗೋಮತಿ ನದಿ ಸಾಗರಸಂಗಮ ತೀರ್ಥ ಸ್ಥಾನ ನಡೆಸಿದರು.
ಭಕ್ತರೊಂದಿಗೆ ದ್ವಾರಕಾಧೀಶ ಕೃಷ್ಣನ ದರ್ಶನಗೈದರು. ಪಲಿಮಾರು ಮಠದ ದ್ವಾರಕಾ ಶಾಖೆ ಮಧ್ವ ಮಠದಲ್ಲಿ ಶ್ರೀ ಉಪೇಂದ್ರ ವಿಠಲ ದೇವರ ಸಂಸ್ಥಾನ ಪೂಜೆಯನ್ನು ನಡೆಸಿದರು.
ಸಂಜೆ ನಡೆದ ಸರಳ ಸಮಾರಂಭದಲ್ಲಿ ದ್ವಾರಕೆಯ ಪೌರಾಭಿನಂದನೆಯನ್ನು ದ್ವಾರಕೆಯ ಮಾಜಿ ಮೇಯರ್ ದ್ವಾರಕಾ ಬ್ರಾಹ್ಮಣ ಸಮಾಜದ ಪ್ರಮುಖ ಭಾರತ್ ಕರಾಡಿಯ,ಆರ್ ಎಸ್ ಎಸ್ ತಾಲೂಕು ಪ್ರಚಾರಕರಾದ ಮಹೇಶ್ ವ್ಯಾಸ, ಆರ್ ಎಸ್ ಎಸ್ ಜಿಲ್ಲಾ ಕಾರ್ಯವಾಹಕ ಜಗದೀಶ್ ಬಾಯಿ, ದೇವಸ್ಥಾನದ ರಕ್ಷಣಾ ಮುಖ್ಯಸ್ಥರು, ನಗರಸಭಾ ಸದಸ್ಯರು ಮತ್ತು ಬೋಲೇ ಬಾಬಾ ವಾಸ್ತು ಭಂಡಾರ ಉದ್ಯಮಿ ಭಾವಿ ಪರ್ಯಾಯ ಶ್ರೀಪಾದರಿಗೆ ಗುರುವಂದನೆಯನ್ನು ಸಮರ್ಪಿಸಿದರು.
ದ್ವಾರಕಾ ಪೌರಾಭಿನಂದನೆಯನ್ನು ಸ್ವೀಕರಿಸಿದ ಪುತ್ತಿಗೆ ಶ್ರೀಗಳು ಉಡುಪಿಗೂ ದ್ವಾರಕೆಗೂ ಶ್ರೀ ಮಧ್ವಾಚಾರ್ಯರಿಗೂ ಇರುವ ಸಂಬಂಧವನ್ನು ತಿಳಿಸುತ್ತಾ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಉಡುಪಿಗೆ ದ್ವಾರಕಾಧೀಶನ ಪ್ರಸಾದವನ್ನು ತರುವಂತೆ ಅಪೇಕ್ಷಿಸಿದರು.
ದ್ವಾರಕೆಯ ಎಲ್ಲಾ ಭಕ್ತರು ಗಣ್ಯರು ಉಡುಪಿಗೆ ಬರುವಂತೆ ಪರ್ಯಾಯ ರಾಯಸವನ್ನು ನೀಡಿ ಆಹ್ವಾನಿಸಿದರು.
ಕಿರಿಯ ಶ್ರೀಪಾದರು ದ್ವಾರಕೆಯ ಮಹಿಮೆಯನ್ನು ತಿಳಿಸಿದರು. ನೂರಾರು ಭಕ್ತರು ಕೋಟಿ ಗೀತಾಲೇಖನ ಯಜ್ಞ ದೀಕ್ಷಾ ಬದ್ಧರಾದರು.ದ್ವಾರಕೆಯ ಪಲಿಮಾರು ಮಠದ ವ್ಯವಸ್ಥಾಪಕ ರಮೇಶ್ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಪುತ್ತಿಗೆ ಮಠದ ಗೀತಾ ಪ್ರಚಾರಕ ರಮೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.