ನಮ್ಮ ಜೊತೆ ಧೈರ್ಯ ಮಾಡಿ ಕೈ ಜೋಡಿಸಿದವರನ್ನು ಕೈ ಬಿಡುವ ಪ್ರಶ್ನೆ ಬರಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಬೆಳಗಾವಿ ಮೇ 31: ಕಷ್ಟ ಕಾಲದಲ್ಲಿ ನಮ್ಮ ಕೈಹಿಡಿದವರನ್ನು ಈಗ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ. ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆಗೆ ಇದೆ. ಯಾವುದೇ ಕಂಡೀಷನ್ ಏನೂ ಇಲ್ಲಾರೀ. ಯಾರೂ ಒಪ್ಪಿಕೊಳ್ಳುವುದು ಬಿಡುವುದು ಇಲ್ಲ, ಅವರು ನಮ್ಮ ಪಕ್ಷದ ನಾಯಕರು. ಬಾರ್ಗೇನಿಂಗ್ ಮಾಡುವಂತದ್ದು ಏನೂ ಇಲ್ಲ. ಯಾರು ನಮ್ಮ ಜೊತೆ ಧೈರ್ಯ ಮಾಡಿ ಕೈ ಜೋಡಿಸಿದ್ದಾರೆ ಅವರನ್ನು ಕೈ ಬಿಡುವ ಪ್ರಶ್ನೆ ಬರಲ್ಲ ಎಂದು ಹೇಳಿದರು.
ಇಷ್ಟು ದಿನ ಚುನಾವಣೆಯಲ್ಲಿ ಬ್ಯುಸಿ ಇದ್ದೆ. ಪಕ್ಷಕ್ಕೆ ಶಕ್ತಿ ಕೊಟ್ಟ ಅನೇಕ ನಾಯಕರನ್ನು ಭೇಟಿಯಾಗಬೇಕಿತ್ತು. ನನಗೆ ಟೈಮ್ ಸಿಕ್ಕಿರಲಿಲ್ಲ, ಸರ್ಕಾರ ರಚನೆ, ಕ್ಯಾಬಿನೆಟ್ ರಚನೆ, ಶಾಸಕಾಂಗ ಸಭೆ, ಗ್ಯಾರಂಟಿಗಳು, ಇಲಾಖಾವಾರು ಪರಿಶೀಲನೆ ಕೆಲಸ ಆಗಬೇಕಿತ್ತು. ಇದರ ಮಧ್ಯದಲ್ಲಿ ಟೈಮ್ ಮಾಡಿಕೊಂಡು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಭೇಟಿ ಆಗಲು ಬಂದಿದ್ದೇನೆ ಎಂದು ಹೇಳಿದರು.
ತುಮಕೂರು ಗುಬ್ಬಿ ವಾಸು, ಶಿವಲಿಂಗೇಗೌಡ, ಪುಟ್ಟಣ್ಣಯ್ಯ, ಬಾಬುರಾವ್ ಚಿಂಚನಸೂರ್ ಇವರೆಲ್ಲ ಇರುವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಕ್ಕೆ ಸೇರಿದರು. ನಮ್ಮ ಪಕ್ಷಕ್ಕೆ ಇವರೆಲ್ಲರೂ ಶಕ್ತಿ ತುಂಬಿದ್ದು, ನಾವು ಅವರ ಶಕ್ತಿ ತುಂಬಬೇಕಾದದ್ದು ನಮ್ಮ ಕರ್ತವ್ಯ. ಹೀಗಾಗಿ ನಾನು ಪಕ್ಷದ ಆಂತರಿಕ ವಿಚಾರ ಚರ್ಚೆ ಸಲಹೆ ಪಡೆಯಲು ಭೇಟಿ ಮಾಡುತ್ತಿದ್ದೇನೆ. ಸೌಹಾರ್ದಯುತವಾಗಿ ಭೇಟಿ ಬಿಟ್ಟು ರಾಜಕೀಯ ವಿಶೇಷ ಏನು ಇಲ್ಲ ಎಂದರು.
ಲೋಕಸಭೆ ಚುನಾವಣೆ ಟಾರ್ಗೆಟ್ ಮಾಡಿ ಇಬ್ಬರೂ ನಾಯಕರ ಬಳಕೆ ಮಾಡುತ್ತಿರಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಅವರು ನಮ್ಮ ಪಕ್ಷದ ನಾಯಕರು. ಅವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಗೆದ್ದಿರಬಹುದು, ಸೋತಿರಬಹುದು ಅವರು ನಮ್ಮ ನಾಯಕರು ಎಂದರು.
ಆ ನಂತರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿ ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಮಾತುಕತೆ ನಡೆಸಿದರು.
ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಡಿಕೆ ಶಿವಕುಮಾರ ಅವರ ಜೊತೆ ಔಪಚಾರಿಕವಾದ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.