ತಾವೇ ಹಿಡಿದಿಟ್ಟಿದ್ದ ಹಾವು ಕಚ್ಚಿ ಸ್ನೇಕ್ ನರೇಶ್ ದುರಂತ ಅಂತ್ಯ
ಚಿಕ್ಕಮಗಳೂರು ಮೇ 30 :ಇಲ್ಲಿನ ಪ್ರಸಿದ್ಧ ಉರಗ ತಜ್ಞ ಸ್ನೇಕ್ ನರೇಶ್ ಅವರು ಸ್ವತಃ ತಾವೇ ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ನಾಗರಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಬೆಳಗ್ಗೆ ನಾಗರಹಾವು ಹಿಡಿದು ಸ್ಕೂಟಿಯಲ್ಲಿ ಇಟ್ಟಿದ್ದ ಸ್ನೇಕ್ ನರೇಶ್ ಅವರು, ಮತ್ತೊಂದು ಹಾವಿದೆ ಎಂದು ಹಿಡಿಯಲು ಹೊರಟ್ಟಿದ್ದರು. ಈ ವೇಳೆ ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ನರೇಶ್ ಅವರ ಕೈಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣವೇ ಸ್ಥಳೀಯರು ನರೇಶ್‌ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕೆಲವು ದಿನಗಳಿಂದ ನರೇಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ, ಹಾವಿನ ವಿಷ ದೇಹವನ್ನು ಸೇರಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮಧ್ಯಾಹ್ನ 2:30ರ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿಯಾಗಿದ್ದ ಇವರು ಸಾವಿರಾರು ಹಾವುಗಳನ್ನ ಸೆರೆ ಹಿಡಿದು, ಕಾಡಿಗೆ ಬಿಟ್ಟು ಸಂರಕ್ಷಣೆ ಮಾಡಿದ್ದರು. ಜಿಲ್ಲಾದ್ಯಂತ ಶಾಲಾ ಮಕ್ಕಳಿಗೆ ಹಾವಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.
ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆ ಸಮೀಪ ನೆಲೆಸಿದ್ದ ಅವರು, ಮೂಲತಃ ವೃತ್ತಿಯಲ್ಲಿ ಟೈಲರ್ ಆಗಿ ಜೀವನ ನಡೆಸುತ್ತಿದ್ದು. ಹಾಗೂ ಪ್ರವೃತ್ತಿಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದರು. ಜಿಲ್ಲೆಯಾದ್ಯಂತ ಖ್ಯಾತಿ ಗಳಿಸಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು.