ಮಂಗಳೂರು: ವಿದೇಶದಲ್ಲಿ ಉದ್ಯೋಗ್ಯದಲ್ಲಿದ್ದ ವ್ಯಕ್ತಿ ನಿಗೂಢ ಸಾವು
ಮಂಗಳೂರು: ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟ ವಿಚಾರಕ್ಕೆ ಸಂಬಂದಿಸಿ ಮೃತರ ಮೃತದೇಹವನ್ನು ಊರಿಗೆ ತರಲು ಶಾಸಕ ಯುಟಿ ಖಾದರ್ ಸ್ಪಂದಿಸಿದ್ದಾರೆ. ಅಲ್ಲದೆ, ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಮೃತದೇಹ ತವರೂರಿಗೆ ತರಲು ಶ್ರಮಿಸುತ್ತಿದೆ.
ವಿದೇಶದಲ್ಲಿ ದುಡಿಯುತ್ತಿದ್ದ ಕುತ್ತಾರು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ (50) ಮೃತಪಟ್ಟವರು. ಸೌದಿ ಅರೇಬಿಯಾದ ಜಿಝಾನ್ ನ ಒಸೋಲ್ ಅಲ್ ಬಾನ್ ಎಂಬ ಕಂಪೆನಿಯಲ್ಲಿ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದ ಅವರ ಮೃತದೇಹವು ಮಾ. 19 ರಂದು ಅವರ ರೂಮಿನಲ್ಲಿ ಪತ್ತೆಯಾಗಿತ್ತು. ಅಂದು ಅವರು ತಮ್ಮ ಕುಟುಂಬದ ಸದಸ್ಯರ ಜೊತೆಗೆ ವಿಡಿಯೊ ಸಂಭಾಷಣೆ ನಡೆಸಿದ್ದರು. ಆದರೆ ಬಳಿಕ ಅವರು ರಾತ್ರಿ ವೇಳೆ ಮನೆಯವರ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಹಿಂದೆ ಮಾತನಾಡುವಾಗ ಅವರು ಎರಡು ದಿನಗಳಲ್ಲಿ ಊರಿಗೆ ಬರುವುದಾಗಿ ತಿಳಿಸಿದ್ದರು. ಅದರೆ ಆ ಬಳಿಕ ಅವರ ಸಾವಿನ ಕುರಿತು ಮುಂಬೈ ಖಾಸಗಿ ಏಜೆನ್ಸಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿತ್ತು.
ಮೃತರ ಮೃತದೇಹವನ್ನು ಊರಿಗೆ ತರುವ ಸಲುವಾಗಿ ಕುಟುಂಬದವರ ಮನವಿಯಂತೆ ಶಾಸಕ ಯು.ಟಿ ಖಾದರ್ ಅವರು, ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಜಿ.ಕೆ.ಸಲೀಂ ಗುರುವಾಯನಕೆರೆ ಮತ್ತು ಸಿದ್ದೀಖ್ ಉಳ್ಳಾಲ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ಅವರು ಆಸ್ಪತ್ರೆಯನ್ನು ಸಂಪರ್ಕಿಸಿದ್ದು, ಪೊಲೀಸ್ ಪ್ರಕ್ರಿಯೆ ಮುಗಿದ ತಕ್ಷಣ ಮೃತದೇಹವನ್ನು ತವರೂರಿಗೆ ಕಳುಹಿಸುವ ಕುರಿತು ಭರವಸೆ ನೀಡಿದ್ದಾರೆ.