ಕುಂದಾಪುರ: ತಾಲೂಕು ಪತ್ರಕರ್ತರ ಸಂಘದಿಂದ ಅಗಲಿದ ಪತ್ರಕರ್ತ ಹರೀಶ್ ಗೆ ಶ್ರದ್ದಾಂಜಲಿ

ಕುಂದಾಪುರ (ಉಡುಪಿ ಟೈಮ್ಸ್ ವರದಿ): ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಹರೀಶ್ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಹರೀಶ್ ಹಠಾತ್ ಸಾವು ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು.


ಸೋಮವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಅಗಲಿದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಪತ್ರಕರ್ತ ಹರೀಶ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಹರೀಶ್ ಅವರ ಮನೆಯ ವಾತಾವರಣ ನೋಡಿದರೆ ತುಂಬಾ ಬೇಸರವಾಗುತ್ತದೆ. ಇಬ್ಬರು ಸಹೋದರಿಯರು, ತಾಯಿ ಹಾಗೂ ಅನಾರೋಗ್ಯದಲ್ಲಿರುವ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿತ್ತು. ಒಬ್ಬನೆ ಮಗನಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದ ಹರೀಶ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಇಂತಹ ಸಂದರ್ಭದಲ್ಲಿ ಹರೀಶ್ ಈ ರೀತಿಯಾಗಿ ಅಂತ್ಯ ಕಂಡಿರುವುದು ಬಹಳ ನೋವಿನ ಸಂಗತಿ. ಹರೀಶ್ ಕುಟುಂಬದ ಮುಂದಿನ ದಿನಗಳು ಕೂಡ ತುಂಬಾ ಕಷ್ಟಕರವಾಗಲಿದೆ. ಮುಂದಿನ ದಿನಗಳಲ್ಲಿ ಹರೀಶ್ ಅವರ ಹೆಸರಲ್ಲಿ ಏನಾದರೂ ಕಾರ್ಯಕ್ರಮ ಮಾಡಿದರೆ ಅದಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದವರು ಹೇಳಿದರು.

ಹರೀಶ್ ಕುಟುಂಬದ ಸದಸ್ಯ ಹಾಗೂ ಪತ್ರಕರ್ತ ಉದಯ್ ಕುಮಾರ್ ತಲ್ಲೂರು ಮಾತನಾಡಿ, ದಲಿತ‌ ಸಂಘಟನೆಗಳಲ್ಲಿ ಹಾಗೂ ಸೌಹಾರ್ದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಹರೀಶ್ ಅನಾರೋಗ್ಯದಿಂದ ನಮ್ಮನ್ನಗಲಿದ್ದಾರೆ. ಒಬ್ಬ ಒಳ್ಳೆಯ ಮನೆ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಅತ್ಯಂತ ಸ್ವಾಭಿಮಾನಿಯಾಗಿದ್ದ ಹರೀಶ್ ಅವರ ಹೆಸರಲ್ಲಿ ದಲಿತ ಸಂಘರ್ಷ ಸಮಿತಿ ಭೀಮಾಘರ್ಜನೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮನ್ನು ಹಮ್ಮಿಕೊಳ್ಳುವ ತಯಾರಿಯಲ್ಲಿದೆ. ಇದಕ್ಕೆ ಪತ್ರಕರ್ತರ ಸಂಘವು ಬೆಂಬಲ ನೀಡಬೇಕು ಎಂದರು.
ಸಂಘದ ಕಾರ್ಯಕಾರಿಣಿ ಸದಸ್ಯ, ಪತ್ರಕರ್ತ ಜಯಶೇಖರ್ ಮಟಪ್ಪಾಡಿ ಮಾತನಾಡಿ, ಹರೀಶ್ ಅತ್ಯಂತ ಕಿರಿಯ ಪ್ರಾಯದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಎಲ್ಲರೊಂದಿಗೂ ಪ್ರೀತಿಯಿಂದ‌ ಮಿತವಾಗಿ ಮಾತನಾಡುತ್ತಿದ್ದರು. ಯಾವುದೇ ಒಳಮನಸ್ಸಿನ ಬೇಗುದಿಗೊಳಗಾಗದೆ ಒಬ್ಬ ಪತ್ರಕರ್ತನಾಗಿ, ಒಬ್ಬ ಜಾಹೀರಾತು ಸಂಗ್ರಹಕಾರನಾಗಿ ಹರೀಶ್ ಅತ್ಯಂತ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಕೆ.ಸಿ ಹರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಘದ ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮಾತನಾಡಿದರು‌. 
ಹಿರಿಯ ಪತ್ರಕರ್ತ ಕೃಷ್ಣ ಜಿ ಮೆಂಡನ್, ರಾಘವೇಂದ್ರ ಬಳ್ಕೂರು, ಲಕ್ಷ್ಮೀ ಮಚ್ಚಿನ, ಯೋಗೀಶ್ ಕುಂಭಾಸಿ, ಸಿಲ್ವೆಸ್ಟರ್ ಡಿಸೋಜಾ, ದಿನೇಶ್ ರಾಯಪ್ಪನಮಠ, ರಾಜೇಶ್ ಕುಂದಾಪುರ, ನಾಗರಾಜ್ ವಂಡ್ಸೆ, ಪ್ರಶಾಂತ್ ಪಾದೆ, ಸಂತೋಷ್ ಕುಂದೇಶ್ವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!