27 ಸಾವಿರ ‘ಅತಿಥಿ ಶಿಕ್ಷಕರ ನೇಮಕ’ಕ್ಕೆ ಅನುಮತಿ
ಬೆಂಗಳೂರು, ಮೇ 26 : ರಾಜ್ಯದಲ್ಲಿ 27 ಸಾವಿರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಈ ಬಗ್ಗೆ ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, 2023-24ನೆ ಶೈಕ್ಷಣಿಕ ವರ್ಷವು ಮೇ 29ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ 6 ರಿಂದ 8ನೇ ತರಗತಿಗೆ ನೇಮಕ ಮಾಡಿರುವ 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವಾಗುವ ತನಕ ಅಥವಾ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ಎಂಬ ಷರತ್ತು ವಿಧಿಸಿ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅನುಗುಣವಾಗಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
2022-23ನೇ ಸಾಲಿನಲ್ಲಿ ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಗುರುತಿಸುವ ಮತ್ತು ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ಈಗಾಗಲೇ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗಿದೆ. ಇದರ ಆಧಾರದಲ್ಲಿ ಖಾಲಿ ಹುದ್ದೆಗಳಿರುವ ಕಡೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಹಾಗೂ ಅತಿಥಿ ಶಿಕ್ಷಕರ ಆಯ್ಕೆಯು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೂಲಕವೇ ಆಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇರುವ ಶಾಲೆಗಳಿಗೆ ಮತ್ತು ಶಿಕ್ಷಕ ರಹಿತ ಶಾಲೆಗಳಿಗೆ ಮೊದಲ ಆದ್ಯತೆಯಾಗಿ ಪರಿಗಣಿಸಲು ಇಲಾಖೆ ಸೂಚಿಸಿದ್ದಾರೆ.
ಆದ್ಯತೆ ಮೇರೆಗೆ ತ್ವರಿತವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಜಿಲ್ಲಾ ಉಪ ನಿರ್ದೇಶಕರು ತಾಲ್ಲೂಕುವಾರು ಹುದ್ದೆಗಳ ಮರು ಹಂಚಿಕೆಯನ್ನು ಮೇ.26ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಇಲಾಖೆ ಹೇಳಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ.100 ಅತಿಥಿ ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕಾತಿ ಮಾಡಬೇಕು. ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು. ಆಯ್ಕೆ ಮಾಡಿಕೊಂಡ ವಿವರಗಳನ್ನು ಜೂ.10ರೊಳಗೆ ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದ್ದು, ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ 10 ಸಾವಿರ ರೂ. ಗೌರವ ಸಂಭಾವನೆ ಇರುತ್ತದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದ್ದಾರೆ.