ಕಾಂಗ್ರೆಸ್ ಹಿಂದುತ್ವ ವಿರೋಧಿ ನೀತಿ ತಳೆಯುತ್ತಿದೆ-ನಳಿನ್ ಕಟೀಲ್

ಮಂಗಳೂರು ಮೇ 24 : ‘ಪೂಜೆ ಮಾಡುವ ಪೊಲೀಸರನ್ನು ಒಂದು ಪಕ್ಷಕ್ಕೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್‌ನಿಂದ ಆಗುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಆರೋಪಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ನಡೆಯುವ ಎಲ್ಲಾ ಇಲಾಖೆಗಳಲ್ಲಿ ಧರ್ಮದ ಆಚರಣೆಗೆ ಪ್ರತಿಯೊಬ್ಬನಿಗೂ ಅವಕಾಶವಿದೆ. ಅನೇಕ ವರ್ಷಗಳಿಂದ ಇಲಾಖೆಗಳಲ್ಲಿ ಆಯುಧ ಪೂಜೆ, ಶಿಲಾನ್ಯಾಸದಂತಹ ಕಾರ್ಯಕ್ರಮಗಳನ್ನು ಸಂಪ್ರದಾಯಬದ್ಧವಾಗಿ ಮಾಡಿಕೊಂಡು ಬಂದಿದ್ದಾರೆ. ಇದನ್ನು ತಡೆಯುವ ಕಾರ್ಯವನ್ನು ಕಾಂಗ್ರೆಸ್‌ ಮಾಡುತ್ತಿದ್ದು, ಈ ಮೂಲಕ ಮುಖ್ಯಮಂತ್ರಿ ಅವರ ಹೀನ ರಾಜಕಾರಣದ ಮಾನಸಿಕತೆ ಬಯಲಾಗಿದೆ ಎಂದರು.

ಹಿಂದುತ್ವ ವಿರೋಧಿ ನೀತಿಯನ್ನು ಕಾಂಗ್ರೆಸ್‌ ತೆಳೆಯುತ್ತಿದೆ ಎಂದ ಅವರು, ನಾವು ಹೋರಾಟದ ಮೂಲಕ ಅವರಿಗೆ ಉತ್ತರ ನೀಡುತ್ತೇವೆ. ನಾವು ಹಿಂದೂಗಳ ಪರವಾಗಿ, ಮತಾಂತರ ನಿಷೇಧ ಪರ, ಗೋಹತ್ಯೆ ನಿಷೇಧದ ಪರವಾಗಿ ಇದ್ದೇವೆ. ಹಿಂದೂ ಸಮಾಜಕ್ಕೆ ಅಪಮಾನ ಮಾಡಿದರೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಮಾಡುವುದು ಶೋಭೆ ತರುವುದಿಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ಪೂಜೆಗಳನ್ನು ನಂಬಿಕೆ ಆಧಾರದಲ್ಲಿ ಮಾಡುತ್ತಾರೆ. ಕೆಎಸ್‌ಆರ್‌ಟಿಸಿ ಬಸ್, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ. ಇಂತಹ ಪೂಜೆಗಳನ್ನು ನಿಷೇಧಿಸುವ, ಬಹಿಷ್ಕಾರ ಮಾಡುವ ಕ್ರಮ ಸರಿಯಲ್ಲ. ಪೂಜೆ ಮಾಡುವ ಪೊಲೀಸರನ್ನು ಒಂದು ಪಕ್ಷಕ್ಕೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್‌ನಿಂದ ಆಗುತ್ತಿದೆ’ ಎಂದರು.

ಪೊಲೀಸ್ ಇಲಾಖೆಗಳಲ್ಲಿ ರಾಜಕಾರಣ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದ ಅವರು, ಅಧಿಕಾರಿಗಳನ್ನು ನಿಯಂತ್ರಿಸಿ ಅದರ ಮೂಲಕ ಕಾಂಗ್ರೆಸ್ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿದರು.

ಜನರು ಆಡಳಿತ ನಡೆಸಲು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಜನಾಶೀರ್ವಾದ ದೊರೆತ ಮೇಲೆ ಕರ್ತವ್ಯ ನಿರ್ವಹಿಸಬೇಕು. ಆದರೆ, ಕಾಂಗ್ರೆಸ್‌ನವರು ಸರ್ಕಾರ ಬರುವ ಮೊದಲೇ ಜಗಳ ಮಾಡಿಕೊಂಡು ಬಂದವರು, ಈಗ ಒಳಜಗಳ ಬೀದಿ ಜಗಳವಾಗಿ ಹೊರ ಬರುತ್ತಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮಂತ್ರಿಮಂಡಲ ರಚನೆ ಆಗಿಲ್ಲ. ಮಂತ್ರಿಮಂಡಲ ರಚನೆ ಆದ ಮೇಲೆ ಕಾಂಗ್ರೆಸ್ ಸ್ಥಿತಿ ಕಾದುನೋಡಿ’ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!