ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡುವುದಿಲ್ಲ- ಡಿ.ಕೆ. ಶಿವಕುಮಾರ್
ಬೆಂಗಳೂರು ಮೇ 23 : ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ನಮ್ಮ ಸರ್ಕಾರ ಬಿಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಂಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನೀವು ಕೇಸರಿ ಬಟ್ಟೆ ಹಾಕಿಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರಿ. ಈ ಸಭೆಗೂ ಕೇಸರಿ ಬಟ್ಟೆ ಧರಿಸಿ ಬರಬೇಕಾಗಿತ್ತು. ಅದಕ್ಕೆಲ್ಲಾ ಅವಕಾಶ ನೀಡುವುದಿಲ್ಲ. ದೇಶದ ಬಗ್ಗೆ ಗೌರವ ಇದ್ದರೆ ರಾಷ್ಟ್ರಧ್ವಜ ಧರಿಸಿಕೊಂಡು ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಹಿಂದೆ ಏನೇನೆಲ್ಲಾ ನಡೆದಿದೆ ಎಂಬುದು ಗೊತ್ತಿದೆ. ಇಲಾಖೆಯನ್ನು ಕೇಸರೀಕರಣ ಮಾಡಲು ನಮ್ಮ ಸರ್ಕಾರ ಬಿಡುವುದಿಲ್ಲ’ ಎಂದು ತಿಳಿಸಿದರು.
‘ಪೊಲೀಸ್ ಇಲಾಖೆಯಲ್ಲಿ ಎಲ್ಲಿ ನೋಡಿದರೂ ಕಾಸು, ಕಾಸು ಎಂಬ ಮಾತೇ ಕೇಳುತ್ತಿತ್ತು. ನಿಮ್ಮಿಂದ ನಮಗೆ ನಯಾಪೈಸೆ ಹಣವೂ ಬೇಡ. ಹಿಂದೆ ನಡೆದ ಎಲ್ಲವೂ ಇಲ್ಲಿಗೇ ನಿಲ್ಲಬೇಕು. ಜನಸ್ನೇಹಿ ಆಡಳಿತ ಆರಂಭವಾಗಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವವರ ಜತೆ ನಾವು ಇರುತ್ತೇವೆ. ಇನ್ನು ಬದಲಾಗದಿದ್ದರೆ ಅವರನ್ನು ಬದಲಾವಣೆ ಮಾಡುತ್ತೇವೆ. ಈ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ. ಜನ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು’ ಎಂದಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಎಡಿಜಿಪಿ ಹಂತದ ಅಧಿಕಾರಿಯೇ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾದರು. ಹಗರಣ ಬಯಲಿಗೆ ತಂದ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸರು ಕಿರುಕುಳ ನೀಡಿದರು. ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ನಂತೆ ಹೊಡೆದು ಹಾಕಿ ಎಂದು ಸಚಿವರೇ ಹೇಳಿದರೂ ಪ್ರಕರಣ ದಾಖಲಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.