ದಿಲ್ಲಿಯಿಂದ ಚಂಡೀಗಢಕ್ಕೆ ಟ್ರಕ್ ಸವಾರಿ ಮಾಡಿ, ಚಾಲಕರ ಕಷ್ಟ ಆಲಿಸಿದ ರಾಹುಲ್ ಗಾಂಧಿ
ಹೊಸದಿಲ್ಲಿ ಮೇ 23 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರಾತ್ರಿ ಟ್ರಕ್ ಚಾಲಕರನ್ನು ಭೇಟಿ ಮಾಡಿ “ಅವರ ಸಮಸ್ಯೆಗಳನ್ನು ಆಲಿಸಿದರು.
ತಮ್ಮ ತಾಯಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಗೆ ಪ್ರಯಾಣ ಬೆಳೆಸುತ್ತಿದ್ದ ರಾಹುಲ್ ಗಾಂಧಿ ಅವರು ಮಾರ್ಗ ಮಧ್ಯೆ, ಹರ್ಯಾಣದ ಸೋನಿಪತ್ ನಲ್ಲಿರುವ ಧಾಬಾದಲ್ಲಿ ಟ್ರಕ್ ಡ್ರೈವರ್ಗಳನ್ನು ಭೇಟಿಯಾದರು ಹಾಗೂ ಅಂಬಾಲಾಗೆ ಸವಾರಿ ಮಾಡಲು ನಿರ್ಧರಿಸಿದರು, ಈ ಸಮಯದಲ್ಲಿ ಅವರು ಚಾಲಕರ ಕೆಲಸ ಮತ್ತು ಕಷ್ಟಗಳ ಬಗ್ಗೆ ತಿಳಿದುಕೊಂಡರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಸಹ-ಚಾಲಕನ ಸೀಟಿನಲ್ಲಿ ಕುಳಿತು ಟ್ರಕ್ ಚಾಲಕರೊಂದಿಗೆ ಮಾತನಾಡುತ್ತಾ ದಿಲ್ಲಿಯಿಂದ ಚಂಡೀಗಡಕ್ಕೆ ಪ್ರಯಾಣಿಸಿದರು. ಈ ವೇಳೆ ದಿಲ್ಲಿಯಿಂದ ಅಂಬಾಲಾಗೆ ಪ್ರಯಾಣಿಸುತ್ತಿದ್ದ ಇತರ ಚಾಲಕರು ರಾತ್ರಿ ಟ್ರಕ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನೋಡಿದಾಗ ಆಶ್ಚರ್ಯಚಕಿತರಾದರು.
ಇದೀಗ ಟ್ರಕ್ ನೊಳಗೆ ಕುಳಿತಿದ್ದ ರಾಹುಲ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ಚಾಲಕರತ್ತ ಕೈಬೀಸುತ್ತಿದ್ದ ವೀಡಿಯೊ ವೈರಲ್ ಆಗಿದೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ “ಜನನಾಯಕ ರಾಹುಲ್ ಗಾಂಧಿ ಟ್ರಕ್ ಚಾಲಕರ ಸಮಸ್ಯೆ ಕೇಳಲು ಅವರನ್ನು ಭೇಟಿಯಾದರು. ಟ್ರಕ್ ನಲ್ಲಿ ಕುಳಿತು ಅವರೊಂದಿಗೆ ದಿಲ್ಲಿಯಿಂದ ಚಂಡಿಗಡಕ್ಕೆ ಪ್ರಯಾಣಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಸುಮಾರು 90 ಲಕ್ಷ ಚಾಲಕರು ಭಾರತೀಯ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಅವರಿಗೆ ಅವರದೇ ಆದ ಸಮಸ್ಯೆಗಳಿವೆ. ರಾಹುಲ್ ಜಿ, ಚಾಲಕರ ಮನ್ ಕಿ ಬಾತ್ ಆಲಿಸುವ ಕೆಲಸ ಮಾಡಿದರು” ಎಂದು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಭಾಷಣವನ್ನು ಟೀಕಿಸಿದೆ.