ನೋಟು ಬ್ಯಾನ್‌ನಲ್ಲಿ ಎದುರಾದ ಪರಿಸ್ಥಿತಿಯನ್ನು ಮತ್ತೊಮ್ಮೆ ಎದುರಿಸಬೇಕಾದೀತು: ಎಐಪಿಡಿಎ
ಹೊಸದಿಲ್ಲಿ ಮೇ 23 : 2000 ಮುಖಬೆಲೆಯ ನೋಟು ಹಿಂಪಡೆಯುವಿಕೆ ನಿರ್ಧಾರದಿಂದ ನೋಟು ಬ್ಯಾನ್‌ನಲ್ಲಿ ಎದುರಾದ ಪರಿಸ್ಥಿತಿಯನ್ನೇ ಎದುರಿಸಬೇಕಾದೀತು ಎಂದು ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಎಐಪಿಡಿಎ) ಹೇಳಿದೆ.
2000 ಮುಖಬೆಲೆಯ ನೋಟು ಹಿಂಪಡೆಯುವಿಕೆಯ ಸರಕಾರದ ನಿರ್ಧಾರದ ಬಗ್ಗೆ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಎಐಪಿಡಿಎ, 2,000 ರೂಪಾಯಿ ನೋಟು ಹಿಂತೆಗೆದುಕೊಳ್ಳುವಿಕೆಯನ್ನು ಘೋಷಿಸಿದಾಗಿನಿಂದ ನಗದು ವಹಿವಾಟಿನ ಸಂಖ್ಯೆ ಹೆಚ್ಚಾಗಿದೆ. ರೂ 2,000 ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಗೊಳ್ಳುವ ಮೊದಲು, ನಮ್ಮ ನಗದು ಮಾರಾಟದಲ್ಲಿ 10% ಮಾತ್ರ ರೂ 2,000 ನೋಟಿನ ಮೂಲಕ ಸ್ವೀಕರಿಸುತ್ತಿದ್ದೆವು, ಆದರೆ ಈಗ ನಮ್ಮ ಔಟ್‌ಲೆಟ್‌ಗಳಲ್ಲಿ ಸ್ವೀಕರಿಸಿದ ಸುಮಾರು 90% ನಗದು ರೂ 2,000 ನೋಟುಗಳ ರೂಪದಲ್ಲಿದೆ ಎಂದು ತಿಳಿಸಿದೆ.
ಹಾಗೂ ಗ್ರಾಹಕರು ಸಣ್ಣ ವಹಿವಾಟುಗಳಿಗೂ ಸಹ 2000 ರ ನೋಟುಗಳನ್ನೇ ಬಳಸಲು ಪ್ರಯತ್ನಿಸುತ್ತಿದ್ದಾರೆ, ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಚಿಲ್ಲರೆಯ ಅಭಾವ ಉಂಟಾಗಿದೆ. ಅಲ್ಲದೆ ಈ ಅವಧಿಯಲ್ಲಿ ಮಾರಾಟದ ಹೆಚ್ಚಿದ ಕಾರಣ ಸಂಭಾವ್ಯ ಆದಾಯ ತೆರಿಗೆ ನೋಟೀಸ್ ಮತ್ತು ದಾಳಿಗಳ ಬಗ್ಗೆ ಅಸೋಸಿಯೇಷನ್ ಕಳವಳ ವ್ಯಕ್ತಪಡಿಸಿದೆ.
ನೋಟು ಅಮಾನ್ಯೀಕರಣದ ನಂತರ ಹೆಚ್ಚಿನ ವಿತರಕರು ತಮ್ಮ ತಪ್ಪಿಲ್ಲದೆ ಆದಾಯ ತೆರಿಗೆ ನೋಟಿಸ್‌ಗಳನ್ನು ಸ್ವೀಕರಿಸಿದ್ದರು, ಅಂದು ಎದುರಿಸಿದ ಸನ್ನಿವೇಶವನ್ನು ಈ ಬಾರಿಯೂ ಎದುರಿಸಬೇಕಾಗಬಹುದು ಹಾಗೂ ರೂ 2,000 ನೋಟು ಹಿಂಪಡೆಯುವ ಘೋಷಣೆಗೂ ಮುನ್ನ, ತಮ್ಮ ದೈನಂದಿನ ವಹಿವಾಟಿನಲ್ಲಿ ಸುಮಾರು 40% ಡಿಜಿಟಲ್ ವಹಿವಾಟಿನ ಮೂಲಕ ನಡೆದಿದ್ದು, ಈಗ ಅದು ಕೇವಲ 10% ಕ್ಕೆ ಇಳಿದಿದೆ, ಏಕೆಂದರೆ ಗ್ರಾಹಕರು 2,000 ರೂ ನೋಟನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಐಪಿಡಿಎ ಹೇಳಿದೆ.