ಡ್ಯಾಮೇಜ್ ಕಂಟ್ರೋಲ್‌ಗೆ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಆದ್ರಾ ಡಿಕೆಶಿ?

ಬೆಂಗಳೂರು ಮೇ 22 : ನಾನು ಎಸ್‌ಎಂ ಕೃಷ್ಣ ಶಿಷ್ಯನಲ್ಲ, ನಾನು ಬಂಗಾರಪ್ಪ ಶಿಷ್ಯ ಎಂದು ಹೇಳಿಕೆ ನೀಡಿದ್ದ ಮರುದಿನವೇ  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು‌ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಸದಾಶಿವ ನಗರದ ನಿವಾಸಕ್ಕೆ ತೆರಳಿ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲುಗಳಿಗೆ ನಮಸ್ಕರಿಸಿ, ಅವರಿಗೆ ಶಾಲು ಹೊದಿಸಿ, ಕಾಣಿಕೆ ರೂಪದಲ್ಲಿ ಪುಸ್ತಕವನ್ನು ನೀಡಿ ಗೌರವಿಸಿದ್ದಾರೆ.

ತಮ್ಮ ಮನೆಗೆ ಬಂದು ಕಾಲಿಗೆ ಬಿದ್ದು ಆಶೀರ್ವಾದ ಕೋರಿದ ಡಿ.ಕೆ. ಶಿವಕುಮಾರ್ ಅವರನ್ನು ಎಸ್.ಎಂ. ಕೃಷ್ಣ ಅವರು ಪುಸ್ತಕದ ಉಡುಗೊರೆ ಮೂಲಕ ಹರಸಿದ್ದಾರೆ. ಬ.ನ.ಸುಂದರ ರಾವ್ ಬರೆದಿರುವ ಪುಸ್ತಕ ‘ಬೆಂಗಳೂರಿನ ಇತಿಹಾಸ’ವನ್ನು ಹಸ್ತಾಕ್ಷರ ಸಹಿತವಾಗಿ ಉಡುಗೊರೆಯಾಗಿ ನೀಡಿ,ಡಿ.ಕೆ.ಶಿವಕುಮಾರ್ ಅವರನ್ನು ಗೆಳೆಯ ಎಂದು ಕರೆದಿದ್ದಾರೆ.

ಇನ್ನು ನಿನ್ನೆ ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ‘ನಾನು ಬಂಗಾರಪ್ಪ ಶಿಷ್ಯ, ಎಸ್‌ಎಂ ಕೃಷ್ಣ ಶಿಷ್ಯನಲ್ಲ. 1990ರಲ್ಲಿ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯಕ್ಕೆ ಈಡಾದ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಲಹೆ ನೀಡಿದವರಲ್ಲಿ ನಾನೂ ಒಬ್ಬ ಎಂದು ಹೇಳಿದ್ದರು. 

ಒಂದೆಡೆ ಇವರ ಈ ಹೇಳಿಕೆ ಇದುವರೆಗೆ ತಾನು ಎಸ್ಎಂ ಕೃಷ್ಣ ಅವರ ಶಿಷ್ಯ ಎಂದು ಹೇಳಿಕೊಂಡಿದ್ದ ಡಿ.ಕೆ. ಶಿವಕುಮಾರ್ ಒಮ್ಮಿಂದೊಮ್ಮೆಗೆ ಪ್ಲೇಟ್ ಬದಲಿಸಿದ್ದು ಯಾಕೆ ಎಂದು ಚರ್ಚೆ ಹುಟ್ಟುಹಾಕಿತ್ತು. ಅಲ್ಲದೆ ಮತ್ತೊಂದೆಡೆ ಈ ಹೇಳಿಕೆ ನೀಡಿದ್ದ ಒಂದೇ ದಿನದಲ್ಲಿ ಎಸ್.ಎಂ ಕೃಷ್ಣ ಅವರನ್ನು ಭೇಟಿ ಆಗಿರುವುದು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರಾ ಎಂಬ ಮಾತುಗಳೂ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!