ಶಾಲಾ ಹಂತಗಳಲ್ಲಿಯೇ ಕೊಂಕಣಿ ಭಾಷೆ ಕಲಿಸುವಂತಾಗಬೇಕು: ಡಾ.ಕಸ್ತೂರಿ ಮೋಹನ್
ಉಡುಪಿ( ಉಡುಪಿ ಟೈಮ್ಸ್ ವರದಿ): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 2 ದಿನಗಳ ಕಾಲ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಮಾ. 21 ರಂದು ಮಣಿಪಾಲ ಆರ್ ಎಸ್ ಬಿ ಸಭಾಭವದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ. ಕಸ್ತೂರಿ ಮೋಹನ್ ಪೈ ಅವರು ಮಾತನಾಡಿ, ಕೊಂಕಣಿ ಭಾಷಿಕರು ಶೇ. 99 ಶಿಕ್ಷಿತರಾದರೂ ಕೊಂಕಣಿ ಭಾಷಾ ಸಾಹಿತ್ಯದಲ್ಲಿ ಹಿಂದೆ ಇದ್ದಾರೆ. ಇದನ್ನು ಬಲಪಡಿಸಲು ಶಾಲಾ ಹಂತಗಳಲ್ಲಿಯೇ ಕೊಂಕಣಿ ಭಾಷೆಯನ್ನು ಕಲಿಸುವಂತಾಗಬೇಕು. ‘ಇದಕ್ಕಾಗಿ ಸರಕಾರ ಕೊಂಕಣಿ ಶಿಕ್ಷಕರ ನೇಮಕಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಂಕಣಿ ಶಿಕ್ಷಕರ ನೇಮಕಕ್ಕೆ ಸರಕಾರ ಕ್ರಮ ವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದ ಅವರು, ಕೊಂಕಣಿ ಭಾಷೆಯನ್ನು ಶಾಲಾ ಹಂತಗಳಲ್ಲಿ ಬೆಳೆಸಬೇಕು. ಅಲ್ಲದೆ ಇಂಗ್ಲಿಷ್ ಗಿರುವಂತೆ ಕೊಂಕಣಿ ಪಠ್ಯ ಪುಸ್ತಕವೂ ಏಕರೂಪತೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಈ ವೇಳೆ, ಉಡುಪಿ ಧರ್ಮಪ್ರಾಂತದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ. ವಿಶೇಷ ಆಚಾರ ವಿಚಾರ, ಮೌಲ್ಯ ಗಳನ್ನು ಹೊಂದಿದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಂಸ್ಕೃತಿಯ ಬೇರುಗಳನ್ನುಹೊಂದಿದ ಭಾಷೆ ಕೊಂಕಣಿಯಾಗಿದೆ. ಅಕಾಡೆಮಿಯು ಭಾಷೆ, ಸಂಸ್ಕೃತಿಗೆ ಉತ್ತೇಜನ ನೀಡುತ್ತಿದ್ದು, ಅಮೆರಿಕ ಸಹಿತ ವಿದೇಶಗಳಲ್ಲೂ ಕೊಂಕಣಿ ಭಾಷಿಗರ ಸಂಘಟನೆಗಳಿವೆ ಎಂದರು.
ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ನಕ್ವಾ ಯಾಹ್ಯಾ ಅವರು ಮಾತನಾಡಿ, ಕೊಂಕಣಿ ಭಾಷಿಗರು ಎಂದಿಗೂ ತಮ್ಮ ಬಾಷೆಯನ್ನು ಬಿಟ್ಟುಕೊಡಬಾರದು ಎಂದು ಕರೆ ನೀಡಿ, ನವಾಯತ್ ಮುಸ್ಲೀಮರ ಭಾಷೆಯೂ ಕೊಂಕಣಿ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಶಾಲೆಗಳಲ್ಲಿ ಮಾತೃಭಾಷೆಯಾಗಿ ಕೊಂಕಣಿ ಕಲಿಕೆ, ಸ್ನಾತಕೋತ್ತರ ಸ್ತರದಲ್ಲಿ ಕೊಂಕಣಿ ಅಧ್ಯಯನವಿಷಯ ಶಿಕ್ಷಕರ ನೇಮಕ, 42 ಭಾಷಿಕರನ್ನು ಒಟ್ಟಿಗೆ ತರುವ ಕಾರ್ಯಕ್ರಮ ಆಯೋಜನೆ, ಮಂಗಳೂರಿನಲ್ಲಿ ಕೊಂಕಣಿ ಅಧ್ಯಯನ ಮತ್ತು ಸಂಶೋಧನ ಕೇಂದ್ರ ತೆರೆಯಲು ಹೆಚ್ಚುವರಿ 3 ಕೋ. ರೂ ಅನುದಾನ ಹಾಗೂ ಅಕಾಡೆಮಿ ಅನುದಾನ ರೂ. 2 ಕೋ. ಗೆ ಏರಿಕೆ ಮಾಡುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ ಪೈ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸಮ್ಮೇಳನದ ಗೌರವ ಸಲಹೆಗಾರ ಡಾ. ನಂದಗೋಪಾಲ ಶೆಣೈ, ಉದ್ಯಮಿಗಳಾದ ಮಂಗಳೂರಿನ ನಿಶಾಂತ್ ಶೇಟ್, ಹುಬ್ಬಳ್ಳಿಯ ಸತೀಶ್ ಶೇಜವಾಡ್ಕರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉದ್ಯಮಿ ವಿಶ್ವನಾಥ್ ಶೆಣೈ, ಮಂಗಳೂರು ಪೂರ್ಣಾನಂದ ಪ್ರತಿಷ್ಟಾನದ ಡಿ. ರಮೇಶ್ ನಾಯಕ್, ಅಕಾಡೆಮಿಯ ಸದಸ್ಯೆ ಪೂರ್ಣಿಮ ಸುರೇಶ್ ನಾಯಕ್, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಕಾರ್ಯಾಧ್ಯಕ್ಷ ಮಹೇಶ್ ಠಾಗೂರ್, ಉಪಾಧ್ಯಕ್ಷ ಗಣೇಶ್ ನಾಯಕ್ ಕಲ್ಮರ್ಗಿ, ಪೆರ್ಣಂಕಿಲ ಶ್ರೀಶ ನಾಯಕ್, ರಿಜಿಸ್ಟರ್ ಮನೋಹರ ಕಾಮತ್ ಉಪಸ್ಥಿತರಿದ್ದರು