ಕಾಂಗ್ರೆಸ್ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗನ ಹತ್ಯೆ: ಬಿಜೆಪಿ ಖಂಡನೆ

ಬೆಂಗಳೂರು ಮೇ 15: ಕಾಂಗ್ರೆಸ್ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗ ಕೃಷ್ಣಪ್ಪ ಅವರನ್ನು ಹತ್ಯೆ ಮಾಡಿರುವ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಕೃಷ್ಣಪ್ಪ ಹತ್ಯೆ ಪ್ರಕರಣ ಪ್ರಸ್ತಾಪಿಸಿ ಟ್ವಿಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಆಗಲೇ ಸ್ಥಿಮಿತ ಕಳೆದುಕೊಂಡಿದ್ದು, ಹೊಸಕೋಟೆಯಲ್ಲಿ ವಿಜಯೋತ್ಸವದ ವೇಳೆ ನಮ್ಮ ಕಾರ್ಯಕರ್ತನೊಬ್ಬನ ಹತ್ಯೆಗೈಯಲಾಗಿದೆ’ ಎಂದು ಬರೆದುಕೊಂಡಿದೆ.

ಹಾಗೂ ‘ರಾಜ್ಯಕ್ಕೆ ಗೂಂಡಾರಾಜ್ ತರಲಿರುವ ಕಾಂಗ್ರೆಸ್‌ನ ಮುಂದಿನ 5 ವರ್ಷಗಳ ಕಾನೂನು ಸುವ್ಯವಸ್ಥೆಯ ಚಿತ್ರಣ ಮೊದಲ ದಿನವೇ ಜನತೆಗೆ ಗೊತ್ತಾಗಿದೆ. ಕಾಂಗ್ರೆಸ್ಸಿಗರೇ ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ, ಎಚ್ಚರ’ ಎಂದು ಬಿಜೆಪಿ ಗುಡುಗಿದೆ.

ಕೃಷ್ಣಪ್ಪ ಶವವನ್ನು ನಂದಗುಡಿ ಪೊಲೀಸ್‌ ಠಾಣೆ ಎದುರು ಇಟ್ಟು ಬಿಜೆಪಿ ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದ್ದರು. ಹಾಗೂ ಕೃಷ್ಣಪ್ಪ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನನಿರತ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸತೀಶ್, ಜಿ.ಪಂ. ಮಾಜಿ ಸದಸ್ಯ ಸಿ.ನಾಗರಾಜ್ ಮತ್ತು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರು.

`ಆರೋಪಿಗಳಾದ ಆದಿ, ಗಣೇಶ್, ಹರೀಶ್ ಮತ್ತು ಚನ್ನಕೇಶವ ಎಂಬುವವರ ಮೇಲೆ ಈಗಾಗಲೇ ದೂರು ನೀಡಿದ್ದೇವೆ. ಆದರೆ, ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದ್ದಾರೆ.

‘ಕೊಲೆಗೆ ಸಂಬಂಧಿಸಿದಂತೆ ಆರೋಪಿ ಆದಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಹುಡುಕಾಟ ನಡೆಸಲಾಗಿದೆ. ಅದಷ್ಟು ಬೇಗ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಂದಗುಡಿ ಸಿಪಿಐ ದಿವಾಕರ್ ಭರವಸೆ ನೀಡಿದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದ್ದಾರೆ.

ಘಟನೆಗೆ ಸಂಬಂಧಿಸಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಕೃಷ್ಣಪ್ಪ ಅವರ ಮಗ ಬಾಬೂ ಮತ್ತು ಸೊಸೆಗೆ ಸಾಂತ್ವನ ಹೇಳಿದ್ದಾರೆ.

ಹಾಗೂ ‘ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಧೈರ್ಯಗೆಡಬೇಡಿ. ನಿಮ್ಮ ಜೊತೆ ನಾನಿದ್ದೆನೆ. ಕಾಂಗ್ರೆಸ್ ಅಭ್ಯರ್ಥಿ ಶರತ್‌ ಬಚ್ಚೇಗೌಡ ಕಡೆಯವರು ಈ ಕೃತ್ಯ ಎಸಗಿದ್ದಾರೆ’ ಎಂದು ಆರೋಪ ಮಾಡಿದರು. ಜೊತೆಗೆ ಕೃತ್ಯ ಎಸಗಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!