ಜಯನಗರ 16 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು- ಕಾನೂನು ಹೋರಾಟಕ್ಕೆ ಸೌಮ್ಯ ರೆಡ್ಡಿ
ಬೆಂಗಳೂರು ಮೇ 13 : ಕೊನೆಗೂ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ರಾಮ ಮೂರ್ತಿ ಅವರು ಕಾಂಗ್ರೆಸ್ ನ ಸೌಮ್ಯಾರೆಡ್ಡಿ ವಿರುದ್ಧ 16 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ.
ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮರು ಮತ ಎಣಿಕೆ ಕಾರ್ಯ ನಡೆದಿದ್ದು, ಈ ಬಗ್ಗೆ ಚುನಾವಣಾಧಿಗಳು ಅಧಿಕೃತ ಘೋಷಣೆ ಮಾಡಿದ್ದಾರೆ.
ಬೆಳಗ್ಗೆ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ 57591 ಮತಗಳನ್ನು ಪಡೆದರೆ, ಬಿಜೆಪಿಯ ಸಿ. ಕೆ. ರಾಮಮೂರ್ತಿ 57297 ಮತಗಳನ್ನು ಪಡೆದಿದ್ದರು.
ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರದಲ್ಲಿ ಮತ ಎಣಿಕೆಯು ಮೊದಲ ಸುತ್ತಿನಿಂದಲೂ ಹಾವು-ಏಣಿಯಾಟ ನಡೆಯುತ್ತಲೇ ಇತ್ತು. 16 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 294 ಮತಗಳಿಂದ ಮುನ್ನಡೆ ಸಾಧಿಸಿರುವುದನ್ನು ಚುನಾವಣಾ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು. ನಂತರ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿದರು. ಒಟ್ಟು ಮೂರು ಬಾರಿ ಮರು ಎಣಿಕೆ ಮಾಡಲಾಯಿತು. ನಾಲ್ಕು ಬಾರಿ ಮತ್ತೆ ಮತ್ತೆ ಎಣಿಸಿದರೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದರು.
ಇನ್ನು ಈ ಫಲಿತಾಂಶದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸೋತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಮತ ಎಣಿಕೆ ನಡೆದಾಗ 160 ಮತಗಳಿಂದ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಆದರೆ ತದನಂತರ ಸಂಸದ ತೇಜಸ್ವಿ ಸೂರ್ಯ, ಆರ್. ಅಶೋಕ್ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿ ಅಕ್ರಮ ನಡೆಸಿದ್ದು, ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.