ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯಿಂದ ವೈದ್ಯೆ ಕೊಲೆ
ಕೊಲ್ಲಂ, ಮೇ 10: ಪೊಲೀಸ್ ಕಸ್ಟಡಿಯಲ್ಲಿ ಇದ್ದ ಆರೋಪಿಯೋರ್ವ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಪ್ರದೇಶದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಕೊಲ್ಲಮ್‍ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಂದನಾ ದಾಸ್ (23) ಮೃತ ವೈದ್ಯೆ. ಆರೋಪಿಯನ್ನು ನೆಡುಂಪಣ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್ ಸಂದೀಪ್ ಎಂದು ಗುರುತಿಸಲಾಗಿದೆ.
ಮುಂಜಾನೆ ಈ ಘಟನೆ ಸಂಭವಿಸಿದ್ದು, ವಂದನಾ ದಾಸ್ ಅವರು ಘಟನೆ ನಡೆದು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಮದ್ಯವ್ಯಸನಿಯಾಗಿದ್ದ ಸಂದೀಪ್ ಸಿಟ್ಟುಗೊಂಡು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ನಂತರ ಆತನನ್ನು ಆತನ ಮನೆಯಿಂದ ಬಂಧಿಸಿದ್ದಾರೆ. ಸಂದೀಪ್ ಅವರ ಹಿಂಸಾತ್ಮಕ ವರ್ತನೆಯ ಬಗ್ಗೆ ಅವರ ಕುಟುಂಬ ಸದಸ್ಯರು ದೂರು ನೀಡಿದ್ದರು. ಸಂದೀಪ್ ಕಾಲಿಗೆ ಸಣ್ಣ ಗಾಯವಾಗಿದ್ದರಿಂದ, ಪೊಲೀಸ್ ತಂಡವು ಅವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು. ಅಲ್ಲಿ ಆತ ಯಾವುದೇ ಪ್ರಚೋದನೆಯಿಲ್ಲದೆ ಹಲ್ಲೆ ನಡೆಸಿದ್ದಾನೆ. ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದಾಗ ಆರೋಪಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲು ಚಾಕು ಇರಿತಕ್ಕೆ ಒಳಗಾದವರು ಪೊಲೀಸ್ ಪೇದೆ. ಎಲ್ಲರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವೈದ್ಯೆಯನ್ನು ಅಟ್ಟಿಸಿಕೊಂಡು ಹೋಗಿ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೇ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಶಿಕ್ಷಕನಾಗಿದ್ದ ಆರೋಪಿಯನ್ನು ಮಾದಕ ವ್ಯಸನದಿಂದಾಗಿ ಅಮಾನತುಗೊಳಿಸಲಾಗಿತ್ತು. ಅಲ್ಲದೆ ಇತ್ತೀಚೆಗಷ್ಟೇ ಡಿ-ಅಡಿಕ್ಷನ್ ಸೆಂಟರ್ ನಿಂದ ಹೊರಬಂದಿದ್ದ . ಈ ನಡುವೆ ಮನೆಯಲ್ಲಿ ಜಗಳ ನಡೆದಿದ್ದು, ಆತನ ಕಾಲಿಗೆ ಗಾಯವಾಗಿತ್ತು. ಆತನೊಂದಿಗಿದ್ದ ಸಂಬಂಧಿಗೂ ಹಾಗೂ ಪೊಲೀಸರಿಗೂ ಚೂರಿ ಇರಿದಿದ್ದಾನೆ ಎಂದು ತಿಳಿದು ಬಂದಿದೆ.