ವಿಜಯಪುರದಲ್ಲಿ ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು
ವಿಜಯಪುರ ಮೇ 10: ತಪ್ಪು ಮಾಹಿತಿಯಿಂದಾಗಿ ಗ್ರಾಮಸ್ಥರೇ ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಗ್ರಾಮಸ್ಥರು ಮತ ಯಂತ್ರಗಳನ್ನು ಒಡೆದು ಹಾಕಿದ್ದಾರೆ.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ (EVM), ವಿವಿಪ್ಯಾಟ್ ಮಶೀನ್‍ಗಳಾಗಿದ್ದವು. ಅವುಗಳನ್ನು ಸಿಬ್ಬಂದಿಯು ವಾಪಸ್ ತರೋದನ್ನು ಗಮನಿಸಿ ಜನರು ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.