ಮಹಿಳೆಯ 40 ಲ. ರೂ. ಎಫ್‌ಡಿ ಹಣವನ್ನು ಲಪಟಾಯಿಸಿದ ಬ್ಯಾಂಕ್ ವ್ಯವಸ್ಥಾಪಕ

ಡೆಹ್ರಾಡೂನ್(ಉತ್ತರಖಂಡ್) ಮೇ.5:  ಬ್ಯಾಂಕ್ ಸಹಾಯಕ ವ್ಯವಸ್ಥಾಪಕನೊಬ್ಬ, ಮಹಿಳೆಯೊಬ್ಬರ ನಿಶ್ಚಿತ ಠೇವಣಿ(ಎಫ್‍ಡಿ) ಖಾತೆಯಿಂದ ಬರೋಬ್ಬರಿ 40 ಲಕ್ಷ ರೂ.ಗಳನ್ನು ಅಕ್ರಮವಾಗಿ ಪತ್ನಿ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಉತ್ತರಖಂಡ್‍ನಲ್ಲಿ ನಡೆದಿದೆ.

ಡೆಹ್ರಾಡೂನ್‍ನ ಯೂನಿಯನ್ ಬ್ಯಾಂಕ್‍ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ  ನಿಶಾಂತ್ ಸದನ ಎಂಬಾತ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಮಹಿಳೆಯ ಬ್ಯಾಂಕ್ ಖಾತೆಯಿಂದ 40 ಲಕ್ಷ ರೂ.ಗಳನ್ನು ವರ್ಗಾಯಿಸಿ ಆನ್‍ಲೈನ್‍ನಲ್ಲಿ ಜೂಜಾಟದಲ್ಲಿ ಕಳೆದಿದ್ದಾನೆ ಹಾಗೂ ತನ್ನ ಪತ್ನಿ ಮತ್ತು ಇತರ ಸಂಬಂಧಿಕರ ಖಾತೆಗಳಿಗೂ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.

ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ಕಾರ್ಯಾಚರಣೆ ಕೈಗೊಂಡಾಗ ನಿಶಾಂತ್ ಸದನ ವಿರುದ್ಧ ಸಾಕ್ಷ್ಯಗಳು ಸಿಕ್ಕಿವೆ. ಕೂಡಲೇ ಆತನನ್ನು ನೈನಿತಾಲ್ ಜಿಲ್ಲೆಯ ಹಲ್ದ್ವಾನಿನಲ್ಲಿ ಬಂಧಿಸಿದ್ದಾರೆ ಎಂದು ಡೆಹ್ರಾಡೂನ್ ಎಸ್‍ಪಿ ಸಿಟಿ ಸರಿತಾ ದೋಬಲ್ ತಿಳಿಸಿದ್ದಾರೆ.

ನಿಶಾಂತ್ ಆನ್‍ಲೈನ್ ಕ್ಯಾಸಿನೊ ಆಟಗಳನ್ನು ಆಡುವ ಅಭ್ಯಾಸ ಹೊಂದಿದ್ದ. ಇದರಿಂದ ಎಲ್ಲಾ ಹಣವನ್ನು ಜೂಜಾಟಕ್ಕೆ ಬಳಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್ 25ರಂದು ನಿಶಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಸರಿತಾ ದೋಬಲ್ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೂ ಕಳುಹಿಸಲಾಗಿದೆ.

ಬ್ಯಾಂಕ್ ಕೂಡ ತನಿಖೆ ನಡೆಸಿದ್ದು ನಿಶಾಂತ್ ಸದನ ಹಣ ಡ್ರಾ ಮಾಡಿರುವುದು ಖಚಿತವಾಗಿದೆ. ಬ್ಯಾಂಕಿನ ಒತ್ತಡಕ್ಕೆ ಮಣಿದು ಆತ 7.5 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದು, ನಿಶಾಂತ್‍ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!